
ದಶಪಥ ಹೆದ್ದಾರಿ ಶುಲ್ಕ ನಿಲ್ಲಿಸಲು ಆಗ್ರಹಿಸಿ ಪ್ರತಿಭಟನೆ
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಟೋಲ್ ಶುಲ್ಕ ಸಂಗ್ರಹಿಸುವುದನ್ನು ವಿರೋಧಿಸಿ ನಾನಾ ಸಂಘಟನೆಗಳಿಂದ ಹೋರಾಟ ಮುಂದುವರೆದಿದೆ. ಭಾನುವಾರ ಸುಮಾರು ೧೦ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶುಲ್ಕ ಸಂಗ್ರಹ ನಿಲ್ಲಿಸುವಂತೆ ಆಗ್ರಹಪಡಿಸಿವೆ.
ಬಿಡದಿಯ ಶೇಷಗಿರಿಹಳ್ಳಿಯ ಟೋಲ್ ಪ್ಲಾಜಾ ಬಳಿ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಹಲವು ಕನ್ನಡಪರ ಹಾಗೂ ರೈತ ಸಂಘಟನೆಗಳ ಪದಾಧಿಕಾರಿಗಳು ಜಮಾಯಿಸಿ ರಾಜ್ಯ ಬಿಜೆಪಿ ಸರಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಟೋಲ್ ಶುಲ್ಕ ಸಂಗ್ರಹಿಸುತ್ತಿರುವುದು ಸರಿಯಲ್ಲ. ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣವಾಗಿಲ್ಲ. ಹೆದ್ದಾರಿ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಸೇರಿದಂತೆ ಯಾವ ಮೂಲಭೂತ ಸೌಕರ್ಯವನ್ನೂ ಕಲ್ಪಿಸಿಲ್ಲ. ತಕ್ಷಣವೇ ಶುಲ್ಕ ಸಂಗ್ರಹವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಜಯಕರ್ನಾಟಕ ಸಂಘಟನೆ ರಾಜ್ಯ ವಕ್ತಾರ ಪ್ರಕಾಶ್ ರೈ ಮಾತನಾಡಿ, ಎಕ್ಸ್‌ಪ್ರೆಸ್ ಹೈವೆ ಸಂಚಾರಕ್ಕೆ ಪ್ರಾಧಿಕಾರದ ಅಧಿಕಾರಿಗಳು ಅವೈಜ್ಞಾನಿಕ ಧರ ನಿಗದಿ ಮಾಡಿದ್ದು ಕೇವಲ 15 ಕಿ.ಮೀ ವ್ಯಾಪ್ತಿಯ ರಾಮನಗರಕ್ಕೆ 120ರೂ ಶುಲ್ಕ ನಿಗದಿಪಡಿಸಿ ಜನರಿಗೆ ದ್ರೋಹ ಬಗೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಹೇಳಿದಂತೆ ಅಚ್ಛೆದಿನ್ ಅಂದರೆ ಇದೇನಾ? ಈ ಹಗಲು ದರೋಡೆ ವಿರುದ್ಧ ವಿಪಕ್ಷ ನಾಯಕರು ಮಾತನಾಡುತ್ತಿಲ್ಲವೇಕೆ? ಎಲ್ಲರೂ ಇದರ ಕಮೀಷನ್ ಪಾಲುದಾರರಾಗಿದ್ದಾರಾ? ಎಂದು ಪ್ರಶ್ನೆ ಮಾಡಿದರು.
ರೈತಸಂಘ(ರಿ)ರೈತ ಬಣದ ರಾಜ್ಯ ಉಪಾಧ್ಯಕ್ಷ ಪಿ.ಎಂ.ರವೀಗೌಡ ಬಿಡದಿ ಅವರು ಮಾತನಾಡಿ, ಅಗತ್ಯವಸ್ತುಗಳ ಜತೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿರುವ ಬಿಜೆಪಿ ಸರಕಾರ ಹೆದ್ದಾರಿ ಶುಲ್ಕವನ್ನೂ ದುಬಾರಿ ಮಾಡಿರುವುದು ಅಕ್ಷಮ್ಯ. ಪ್ರತಿದಿನ ಕೃಷಿ ಉತ್ಪನ್ನಗಳನ್ನು ಬೆಂಗಳೂರಿಗೆ ಸಾಗಣೆ ಮಾಡುವ ರೈತರು ದುಬಾರಿ ಟೋಲ್ ಶುಲ್ಕವನ್ನು ಕಟ್ಟಲು ಸಾಧ್ಯವೇ? ಸರ್ವೀಸ್ ರಸ್ತೆ ಸಂಪರ್ಕವನ್ನು ಪೂರ್ಣಗೊಳಿಸಬೇಕು ನಂತರ ರೈತರಿಗೆ ಶುಲ್ಕರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹಸಿರುಸೇನೆ ಮತ್ತು ರೈತಸಂಘದ ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಮಾತನಾಡಿ, ಎಕ್ಸ್‌ಪ್ರೆಸ್ ಹೈವೆಗೆ ಭೂಮಿ ಕಳೆದುಕೊಂಡಿರುವ ಕೆಲವು ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ನಿರ್ಲಜ್ಜ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಸರಕಾರಗಳು ಜನಸಾಮಾನ್ಯರು ಮತ್ತು ರೈತರ ಜತೆಗೆ ಚೆಲ್ಲಾಟವಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು. ಒಂದು ತಿಂಗಳ ಅವಧಿಯಲ್ಲಿ ಟೋಲ್ ಶುಲ್ಕವನ್ನು ಕಡಿಮೆ ಮಾಡದಿದ್ದರೇ ರೈತರು ಯಾರೂ ಶುಲ್ಕ ಪಾವತಿಸುವುದಿಲ್ಲ. ಹೋರಾಟಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಸಿದರು.
ಹೋರಾಟದ ನೇತೃತ್ವವಹಿಸಿದ್ದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ರವಿ ಮಾತನಾಡಿ, ದಶಪಥ ಹೆದ್ದಾರಿ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಬಸ್ ತಂಗುದಾಣಗಳನ್ನು ಸ್ಥಾಪಿಸಿಲ್ಲ. ಪ್ರಯಾಣಿಕರಿಗೆ ಆಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೆದ್ದಾರಿ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಹೋಟೆಲ್ ಮತ್ತು ವಿಶ್ರಾಂತಿ ಗೃಹ ನಿರ್ಮಿಸಿಲ್ಲ. ಮಳೆ ಬಂದಾಗ ರಸ್ತೆಗಳು ಜಲಾವೃತವಾಗುತ್ತಿವೆ.
ಈ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಿ ತದನಂತರ ಶುಲ್ಕವನ್ನು ರಿಯಾಯಿತಿ ಧರದಲ್ಲಿ ನಿಗದಿ ಮಾಡಬೇಕು. ಇಲ್ಲವಾದರೆ ಕನ್ನಡಪರ ಸಂಘಟನೆ ಮತ್ತು ರೈತಸಂಘದ ಸುಮಾರು 5 ಸಾವಿರ ಜನರು ಟೋಲ್ ಮುತ್ತಿಗೆ ಹಾಕಿ ಧ್ವಂಸ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 10ಕ್ಕೂ ಹೆಚ್ಚು ಸಂಘಟನೆಗಳಿಂದ ಮನವಿ ಪತ್ರಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಲ್ಲಿಸಲಾಯಿತು.