ದಸರಾ ಗಜಪಡೆಗೆ ಭಾರದ ತಾಲೀಮು

Spread the love

ದಸರಾ ಗಜಪಡೆಗೆ ಭಾರದ ತಾಲೀಮು

ಮೈಸೂರು: ಐತಿಹಾಸಿಕ ಮೈಸೂರು ದಸರಾದ ಜಂಬೂಸವಾರಿ ಸರಳವಾಗಿ ಅರಮನೆ ಆವರಣದಲ್ಲಿಯೇ ನಡೆಯುವುದರಿಂದಾಗಿ ತಾಲೀಮು ಕೂಡ ಅರಮನೆ ಆವರಣಕ್ಕಷ್ಟೆ ಸೀಮಿತವಾಗಿದೆ. ಗಜಪಡೆಯನ್ನು ತಾಲೀಮು ನಡೆಸಿ ಸರ್ವ ರೀತಿಯಲ್ಲಿಯೂ ಸಜ್ಜುಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಅರಮನೆ ಆವರಣದಲ್ಲಿರುವ ಕೋಡಿಸೋಮೇಶ್ವರ ದೇವಸ್ಥಾನದ ಬಳಿ ಅಭಿಮನ್ಯು, ವಿಕ್ರಮ, ಕಾವೇರಿ, ಚೈತ್ರ, ಅಶ್ವತ್ಥಾಮ, ಧನಂಜಯ, ಲಕ್ಷ್ಮೀ, ಗೋಪಾಲಸ್ವಾಮಿಯನ್ನೊಳಗೊಂಡ ಗಜಪಡೆಗೆ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ತಾಲೀಮು ಆರಂಭಿಸಲಾಗಿದೆ.

ಸೋಮವಾರದಿಂದ ಭಾರ ಹೊರುವ ತಾಲೀಮು ಆರಂಭವಾಗಿದ್ದು, ನಿಗದಿಪಡಿಸಿದ ಮುಹೂರ್ತದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಬೆಳಗ್ಗೆ 11.30ಕ್ಕೆ ಆನೆಗಳ ಮೇಲೆ ಕಟ್ಟಲ್ಪಡುವ ಗಾದಿ ಮತ್ತು ನಮ್ದಾಗೆ ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಿ ಆ ನಂತರ ಆನೆಗಳನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಅಂಬಾರಿ ಕಟ್ಟುವ ಕ್ರೇನ್ ಇರುವ ಸ್ಥಳಕ್ಕೆ ಕರೆದೊಯ್ದ ಅಲ್ಲಿ ಗಾದಿ ಮತ್ತು ನಮ್ದಾ ಕಟ್ಟಿ ಅದರ ಮೇಲೆ ಮರಳಿನ ಮೂಟೆಯಿಟ್ಟು ಭಾರದ ತಾಲೀಮು ಆರಂಭಿಸಲಾಯಿತು. ಮೊದಲ ದಿನವಾಗಿರುವುದರಿಂದ ಭಾರದ ಪ್ರಮಾಣ ಕಡಿಮೆಯಿದ್ದು ದಿನಕಳೆದಂತೆ ಹೆಚ್ಚಿಸುತ್ತಾ ಹೋಗಲಾಗುತ್ತದೆ. ಅಲ್ಲಿಂದ ಹೊರಟ ಗಜಪಡೆ ಬಳಿಕ ಅರಮನೆ ಮುಂಭಾಗಕ್ಕೆ ಸಾಲಾಗಿ ಬಂದಿದ್ದು. ಅಂಬಾರಿ ಹೊರುವ ಅಭಿಮನ್ಯು ಭಾರಹೊತ್ತು ಕುಮ್ಕಿ ಆನೆಗಳಾದ ಚೈತ್ರ ಮತ್ತು ಕಾವೇರಿಯೊಂದಿಗೆ ಜಂಬೂಸವಾರಿ ದಿನ ಪುಷ್ಪಾರ್ಚನೆ ಮಾಡುವ ಸ್ಥಳಕ್ಕೆ ಬಂದು ಅಲ್ಲಿ ಗೌರವ ವಂದನೆ ಸ್ವೀಕರಿಸಿ ನಂತರ ಅರಮನೆ ಆವರಣದಲ್ಲಿ ಮೂರು ಸುತ್ತು ಸಂಚರಿಸಿದವು. ಜಂಬೂಸವಾರಿಗೆ ಕೇವಲ ಇಪ್ಪತೈದು ದಿನಗಳಷ್ಟೆ ಬಾಕಿ ಇರುವ ಕಾರಣ ಗಜಪಡೆಯನ್ನು ಸಜ್ಜುಗೊಳಿಸುವ ಕಾರ್ಯ ಜರೂರಾಗಿ ನಡೆಯುತ್ತಿದೆ.


Spread the love