ದಸರಾ ಚಲನಚಿತ್ರೋತ್ಸವದಲ್ಲಿ ವಿವಿಧ ಭಾಷೆಗಳ ಸಿನಿಮಾ ಪ್ರದರ್ಶನ

Spread the love

ದಸರಾ ಚಲನಚಿತ್ರೋತ್ಸವದಲ್ಲಿ ವಿವಿಧ ಭಾಷೆಗಳ ಸಿನಿಮಾ ಪ್ರದರ್ಶನ

ಮೈಸೂರು: ಚಂದನವನದ ತಾರೆಯರ ಮೆರುಗಿನೊಂದಿಗೆ ದಸರಾ ಚಲನಚಿತ್ರೋತ್ಸವ ಆರಂಭಗೊಂಡಿದ್ದು, ಅ.೩ರ ತನಕ ಐನಾಕ್ಸ್ ಮತ್ತು ಡಿಆರ್‌ಸಿ ಮಲ್ಟಿಫ್ಲೆಕ್ಸ್‌ನಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ದಸರಾ ಚಲನಚಿತ್ರೋತ್ಸವ ಉಪ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಟಿಯರಾದ ಅನು ಪ್ರಭಾಕರ್, ಅಮೃತಾ ಅಯ್ಯಂಗಾರ್, ಕಾವ್ಯಶೆಟ್ಟಿ ಸಂಭ್ರಮ ಹೆಚ್ಚಿಸಿದರು. ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಚಲನಚಿತ್ರೋತ್ಸವದಲ್ಲಿ ಹಲವು ಚಲನಚಿತ್ರಗಳನ್ನು ವೀಕ್ಷಿಸುವ ಸುವರ್ಣ ಅವಕಾಶ ಸಿಕ್ಕಿದೆ. ಚಲನಚಿತ್ರೋತ್ಸವದಲ್ಲಿ ಒಂದು ದಿನ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳನ್ನೇ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಯುವ ದಸರಾದಲ್ಲಿ ಅಪ್ಪು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಆಗಮಿಸಲಿದ್ದಾರೆ ಎಂದು ಹೇಳಿದರು.

ನಟಿ ಅನುಪ್ರಭಾಕರ್ ಮಾತನಾಡಿ, 2007ರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಎಂ.ಪಿ.ಶಂಕರ್ ಅವರ ಜೊತೆ ಇದೇ ಚಲನಚಿತ್ರೋತ್ಸವವನ್ನು ಉದ್ಘಾಟಿಸುವ ಮೂಲಕ ವೇದಿಕೆ ಹಂಚಿಕೊಂಡಿದ್ದೆ. ಮತ್ತೆ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಅಪ್ಪು ದಿನ ಮಾಡಿ, ಅಪ್ಪು ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಕರ್ನಾಟಕ, ಕನ್ನಡಿಗರು ಇರುವವರೆಗೂ ಅಪ್ಪು ಅಮರರಾಗಿರುತ್ತಾರೆ ಎಂದು ಹೇಳಿದರು.

ಇನ್ನೋರ್ವ ನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, ಮೈಸೂರು ದಸರಾದಲ್ಲಿ ಆಹಾರ ಮೇಳ, ಫಲಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆ. ಈ ವರ್ಷ ಬಿಡುವು ಮಾಡಿಕೊಂಡು ಹೋಗಬೇಕೆಂದುಕೊಂಡಿರುವೆ ಎಂದು ತಿಳಿಸಿದರು.

ಮತ್ತೊಬ್ಬ ನಟಿ ಕಾವ್ಯಶೆಟ್ಟಿ ಮಾತನಾಡಿ, ದಸರಾ ಚಲನಚಿತ್ರೋತ್ಸವದ ಭಾಗವಾಗಿದ್ದು ಖುಷಿಯಾಗುತ್ತಿದೆ. ಕನ್ನಡ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಶಾಸಕರಾದ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಂತಾದವರು ಭಾಗವಹಿಸಿದ್ದರು.


Spread the love