ದಸರಾ ಜಂಬೂಸವಾರಿಗೆ ಬಂದಿದ್ದ ಲಕ್ಷ್ಮೀ ಆನೆ ಮರಿಗೆ ಜನ್ಮ

Spread the love

ದಸರಾ ಜಂಬೂಸವಾರಿಗೆ ಬಂದಿದ್ದ ಲಕ್ಷ್ಮೀ ಆನೆ ಮರಿಗೆ ಜನ್ಮ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಗಜಪಡೆಯ ಸದಸ್ಯೆ ಲಕ್ಷ್ಮೀ ಗಂಡು ಮರಿಗೆ ಜನ್ಮ ನೀಡುವ ಮೂಲಕ ಗಮನಸೆಳೆದಿದೆ.

ಬಂಡೀಪುರದ ರಾಮಪುರ ಸಾಕಾನೆ ಶಿಬಿರದ 21 ವರ್ಷದ ಲಕ್ಷ್ಮೀ ಮಂಗಳವಾರ ರಾತ್ರಿ 9.30 ಸುಮಾರಿಗೆ ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರನಾಥ ದೇವಾಲಯ ಬಳಿ ಗಂಡುಮರಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿಯಾನೆಯ ಆರೋಗ್ಯ ಸುಸ್ಥಿತಿಯಲ್ಲಿದೆ. ಇತ್ತ ಲಕ್ಷ್ಮೀ ಆನೆ ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡುತ್ತಿದ್ದಂತೆ ರಾಜವಂಶಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು, ಕಾವಾಡಿಗರಲ್ಲಿ ಸಂಭಮ ಮನೆಮಾಡಿದೆ. ತಾಯಿ ಮತ್ತು ಮರಿಯಾನೆಯನ್ನು ಆರೋಗ್ಯದ ದೃಷ್ಟಿಯಿಂದ ಗಜಪಡೆಯಿಂದ ಬೇರ್ಪಡಿಸಿ ಪ್ರತ್ಯೇಕ ಸ್ಥಳದಲ್ಲಿರಿಸಲಾಗಿದೆ.

ಸಹಜವಾಗಿ ದಸರಾ ಉತ್ಸವಕ್ಕೆ ಆನೆಗಳನ್ನು ಕರೆತರುವ ಮುಂಚೆ ಎಲ್ಲಾ ಆನೆಗಳ ಆರೋಗ್ಯವನ್ನು ಪರಿಶೀಲಿಸಲಾಗುತ್ತದೆ. ಬಳಿಕ ಸೂಕ್ತ ಆನೆಗಳನ್ನು ದಸರಾಕ್ಕೆ ಕರೆತರಲಾಗುತ್ತದೆ. ಒಂದು ವೇಳೆ ಹೆಣ್ಣಾನೆ ಗರ್ಭ ಧರಿಸಿದ್ದರೆ ಕರೆತರುವುದಿಲ್ಲ. ಜತೆಗೆ ಅನಾರೋಗ್ಯ, ಮದ ಬಂದಿದ್ದರೂ ದಸರಾದಿಂದ ದೂರ ಇಡಲಾಗುತ್ತದೆ. ಹೀಗಿರುವಾಗ ತುಂಬು ಗರ್ಭಿಣೆ ಲಕ್ಷ್ಮೀಯನ್ನು ದಸರೆ ಕರೆತಂದಿರುವುದರಿಂದ ಲಕ್ಷ್ಮೀ ಆನೆಗೆ ಅರಮನೆ ಅಂಗಳದಲ್ಲಿ ಉತ್ತಮ ಆರೈಕೆ, ನಿಗದಿ ವೇಳೆಯಲ್ಲಿ ತಾಲೀಮು ನಡೆಸಲಾಗಿತ್ತು. ಇದರಿಂದ ಲಕ್ಷ್ಮೀ ಯಾವುದೇ ಕಷ್ಟವಿಲ್ಲದೆ ಗಂಡುಮರಿಗೆ ಜನ್ಮ ನೀಡಿದ್ದಾಳೆ. ಜತೆಗೆ ಎರಡು ಮೂರು ತಿಂಗಳು ಅರಣ್ಯ ಇಲಾಖೆಯಿಂದ ಮೈಸೂರಿನಲ್ಲೇ ಉತ್ತಮ ಆರೈಕೆ ಭಾಗ್ಯವೂ ದೊರೆತಿರುವುದು ಲಕ್ಷ್ಮಿಯ ಅದೃಷ್ಟವಾಗಿದೆ.

ಮೈಸೂರು ವನ್ಯಜಿವಿ ವಿಭಾಗದ ಡಿಸಿಎಫ್ ಡಾ.ವಿ.ಕರಿಕಾಳನ್ ಘಟನೆ ಸಂಬಂಧ ಪ್ರತಿಕ್ರಿಯಿಸಿ, ಲಕ್ಷ್ಮೀ ಗರ್ಭ ಧರಿಸಿರುವ ಬಗ್ಗೆ ನಮಗೆ ತಿಳಿದಿರಲಿಲ್ಲ. ಕುಂತಿ ಆನೆ ಗರ್ಭಾವತಿಯಾದ್ದರಿಂದ ಕರೆತರಲಿಲ್ಲ. ಒಂದು ವೇಳೆ ಲಕ್ಷ್ಮೀ ಗರ್ಭಿಣಿ ಎಂದು ಗೊತ್ತಿದ್ದರೆ ಕರೆತರುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅರಮನೆ ಆವರಣದಲ್ಲಿ 15ವರ್ಷಗಳ ಹಿಂದೆ ದಸರಾ ಉತ್ಸವಕ್ಕೆ ಕರೆತರಲಾಗಿದ್ದ ಸರಳಾ ಎಂಬ ಹೆಣ್ಣಾನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಅರಮನೆ ಆವರಣದಲ್ಲಿ ಹುಟ್ಟಿದ್ದರಿಂದ ಆ ಹೆಣ್ಣುಮರಿಗೆ ಚಾಮುಂಡಿ ಎಂದು ಹೆಸರಿಡಲಾಗಿತ್ತು. ಈಗ ಅದರಂತೆ ಲಕ್ಷ್ಮೀ ಆನೆಯೂ ಮುದ್ದಾದ ಗಂಡು ಮರಿಗೆ ಜನ್ಮ ನೀಡಿರುವುದು ದಸರಾ ಸಂಭ್ರಮ ಇಮ್ಮಡಿಗೊಳಿಸಿದೆ.


Spread the love

Leave a Reply

Please enter your comment!
Please enter your name here