ದಸರಾ ಮಹೋತ್ಸವಕ್ಕೆ ಸಿಎಂಗೆ ಆಹ್ವಾನ

Spread the love

ದಸರಾ ಮಹೋತ್ಸವಕ್ಕೆ ಸಿಎಂಗೆ ಆಹ್ವಾನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರಿಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ಆಹ್ವಾನ ನೀಡಿದರು.

ಸೆ.26ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದ ಸಚಿವರು, ರಾಜ್ಯಪಾಲರನ್ನು ಸನ್ಮಾನಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬಳಿಕ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಫಲಪುಷ್ಪಗಳನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಇದೇ ವೇಳೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದರು.

ನಂತರ ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನು ಭೇಟಿ ಮಾಡಿ, ದಸರಾ ಮಹೋತ್ಸವಕ್ಕೆ ಆಹ್ವಾನಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ದಸರಾ ಸ್ವಾಗತ ಉಪಸಮಿತಿ ಕಾರ್ಯಾಧ್ಯಕ್ಷೆ ರೂಪ ಎಂ.ಜೆ., ಕಾರ್ಯದರ್ಶಿ ಕೆ.ಕುಬೇರಪ್ಪ, ಸಚಿವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಗೌಡ, ವಿಶೇಷ ಕರ್ತವ್ಯಾಧಿಕಾರಿ ದೊಡ್ಡನಾಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸೆ.22ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನಿಸಲಿದ್ದಾರೆ. ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಅವರನ್ನೂ ದಸರಾ ಮಹೋತ್ಸವಕ್ಕೆ ಆಹ್ವಾನಿಸಲಿದ್ದಾರೆ.

ಸೆ.26ರಂದು ನಾಡದೇವತೆ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ನಾಡಹಬ್ಬ ಮೈಸೂರು ದಸರಾ ಆರಂಭವಾಗಲಿದೆ. ಅಂದು ಬೆಳಗ್ಗೆ 9.45ರಿಂದ 10.05ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.


Spread the love

Leave a Reply

Please enter your comment!
Please enter your name here