ದಸರಾ ಮಾವುತರು, ಕಾವಾಡಿಗಳಿಗೆ ಉಪಹಾರ ಕೂಟ

Spread the love

ದಸರಾ ಮಾವುತರು, ಕಾವಾಡಿಗಳಿಗೆ ಉಪಹಾರ ಕೂಟ

ಮೈಸೂರು: ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಲಕ್ಷ್ಮೀ ಆನೆಗೆ ಗಂಡು ಮಗು ಜನಿಸಿದ್ದಲ್ಲದೆ, ಶ್ರೀದತ್ತಾತ್ರೇಯ ಎನ್ನುವ ಹೆಸರನ್ನು ನಾಮಕರಣ ಮಾಡಿದ್ದರಿಂದ ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ಅರಮನೆಗೆ ಆಗಮಿಸಿ ವಾಸ್ತವ್ಯ ಹೂಡಿರುವ ಮಾವುತರು, ಕಾವಾಡಿಗಳ ಕುಟುಂಬ ವರ್ಗದವರಿಗೆ ಅರಮನೆ ಮಂಡಳಿಯಿಂದ ಉಪಹಾರ ಕೂಟ ಏರ್ಪಡಿಸಲಾಗಿತ್ತು.

ಅರಮನೆ ಮಂಡಳಿಯಿಂದ ಏರ್ಪಡಿಸಿದ್ದ ಬೆಳಗಿನ ಉಪಹಾರ ಕೂಟದಲ್ಲಿ ಮಾವುತರು, ಕಾವಾಡಿಗಳಿಗೆ ಊಟ ಬಡಿಸಿದ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳೊಂದಿಗೆ ಕುಳಿತು ಉಪಹಾರ ಸೇವನೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೋಳಿಗೆ ಬಡಿಸಿದರೆ, ಮೇಯರ್ ಶಿವಕುಮಾರ್ ವಡೆ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಇಡ್ಲಿ ಬಡಿಸಿದರು. ನಂತರ ಒಬ್ಬೊಬ್ಬರು ಕೇಸರಿಬಾತ್, ಖಾರಬಾತ್, ದೋಸೆ, ಚಟ್ನಿ, ಆಲೂಗೆಡ್ಡೆ ಪಲ್ಯ, ಸಾಂಬಾರ್ ಬಡಿಸಿದರು. ಉಸ್ತುವಾರಿ ಸಚಿವರು ಪ್ರತಿಯೊಬ್ಬರಿಗೂ ಹೋಳಿಗೆ ಬಡಿಸಿದ ಬಳಿಕ ಮಾವುತರ ಮಕ್ಕಳು ಕುಳಿತಿದ್ದ ಸಾಲಿನಲ್ಲಿ ಕುಳಿತು ಉಪಹಾರ ಮಾಡಿದರು.

ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜೆಎಲ್‌ಆರ್ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ, ಬಿಜೆಪಿ ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್, ವಿ.ಸೋಮಸುಂದರ್, ಎಚ್.ಜಿ.ಗಿರಿಧರ್, ದೇವನೂರು ಪ್ರತಾಪ್, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್ ಸೇರಿದಂತೆ ಅನೇಕರು ಉಪಹಾರ ಸೇವನೆ ಮಾಡಿದರು. ಡಿಸಿಎಫ್ ಡಾ.ವಿ.ಕರಿಕಾಳನ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಇದ್ದರು.

ಇದೇ ವೇಳೆ ಅರಮನೆ ಆವರಣದಲ್ಲಿ ಪೋಷಕರೊಂದಿಗೆ ಇರುವ ಮಕ್ಕಳು ಆಟೋಟಗಳಲ್ಲಿ ತೊಡಗುವಂತೆ ಕ್ರೀಡಾ ಪರಿಕರಗಳನ್ನು ಸಚಿವ ಎಸ್.ಟಿ.ಸೋಮಶೇಖರ್ ವಿತರಿಸಿದರಲ್ಲದೆ ಬ್ಯಾಟ್ ಬೀಸುವ ಮೂಲಕ ಮಕ್ಕಳ ಮನದಲ್ಲಿ ಸಂಭ್ರಮ ಮೂಡಿಸಿದರು. ಕ್ರಿಕೆಟ್ ಆಟಕ್ಕೆ ಬ್ಯಾಟ್, ಬಾಲ್, ವಿಕೆಟ್‌ಗಳು, ಫುಟ್‌ಬಾಲ್ ಮೊದಲಾದ ವಸ್ತುಗಳನ್ನು ನೀಡಿದರು. ಬಹಳ ಖುಷಿಯಿಂದ ಪಡೆದುಕೊಂಡ ಮಕ್ಕಳು ಆನೆಯ ಟೆಂಟ್ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಕ್ರಿಕೆಟ್ ಆಟದಲ್ಲಿ ತೊಡಗಿದ್ದರು.

ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಚಿವ ಸೋಮಶೇಖರ್ ಟೇಪು ಕತ್ತರಿಸಿ ಶಿಬಿರ ಉದ್ಘಾಟಿಸಿದರಲ್ಲದೆ, ಸ್ವತಃ ಬಿಪಿ ತಪಾಸಣೆ ಮಾಡಿಸಿಕೊಂಡರು. ಮಾವುತರು ತಪಾಸಣೆ ಮಾಡಿಸಿಕೊಂಡು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಆಸ್ಪತ್ರೆಯ ನುರಿತ ವೈದ್ಯರು, ಸಿಬ್ಬಂದಿ ದಿನವಿಡೀ ಮಾವುತರು, ಕಾವಾಡಿಗಳು, ಅವರ ಮಕ್ಕಳನ್ನು ಕರೆತಂದು ಜ್ವರ, ಬಿಪಿ, ಶುಗರ್, ಮೈಕೈ ನೋವು, ಹಲ್ಲು ನೋವು ಮೊದಲಾದ ಸಮಸ್ಯೆಗಳನ್ನು ಪರೀಕ್ಷಿಸಿದರು.


Spread the love

Leave a Reply

Please enter your comment!
Please enter your name here