ದಾಂಡೇಲಿ: ಖೋಟಾ ನೋಟು ಜಾಲ: ಆರು ಮಂದಿ ಬಂಧನ, ₹ 72 ಲಕ್ಷದ ನಕಲಿ ನೋಟು ವಶ

Spread the love

ದಾಂಡೇಲಿ: ಖೋಟಾ ನೋಟು ಜಾಲ: ಆರು ಮಂದಿ ಬಂಧನ, ₹ 72 ಲಕ್ಷದ ನಕಲಿ ನೋಟು ವಶ

ದಾಂಡೇಲಿ: ನಕಲಿ ಕರೆನ್ಸಿ ನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರು ಮಂದಿಯನ್ನು ಬಂಧಿಸಿದ್ದು, 72 ಲಕ್ಷ ರೂಪಾಯಿ ಮೌಲ್ಯದ ನಕಲಿ ಕರೆನ್ಸಿ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಕಾರ್ಯಾಚರಣೆಯ ಮಾಹಿತಿ ನೀಡಿದರು.

‘ನಗರ ಸಮೀಪದ ಬರ್ಚಿ ರಸ್ತೆಯ ಚೆಕ್‌ಪೋಸ್ಟ್ ಬಳಿ ಖೋಟಾ ನೋಟುಗಳನ್ನು ಸ್ವಿಫ್ಟ್ ಡಿಸೈರ್ ಕಾರುಗಳಲ್ಲಿ ಸಾಗಿಸುತ್ತಿರುವ ಮಾಹಿತಿ ಲಭಿಸಿತ್ತು. ಅದರಂತೆ ಕಾರ್ಯಾಚರಣೆ ಮಾಡಿ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ’ ಎಂದರು.

‘ಬಂಧಿತರಿಂದ 72 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳು ಮತ್ತು 4.50 ಲಕ್ಷ ಮೌಲ್ಯದ, 500 ಮುಖಬೆಲೆಯ ಅಸಲಿ ನೋಟುಗಳು, ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಬಂಧಿತ ಆರೋಪಿ, ದಾಂಡೇಲಿಯ ವನಶ್ರೀ ನಗರದ ಶಿವಾಜಿ ಶ್ರವಣ ಕಾಂಬಳೆ ಹಾಗೂ ಶಬ್ಬೀರ್ ಅಂತೋನಿ ಇಸ್ಮಾಯಿಲ್ ಕುಟ್ಟಿ ಇಬ್ಬರು 4.50 ಲಕ್ಷ ರೂಪಾಯಿ ನೀಡಿದರೆ, ಅದಕ್ಕೆ ಬದಲಾಗಿ 9 ಲಕ್ಷ ರೂಪಾಯಿ ನೀಡುತ್ತೇವೆ ಎಂದು ನಮ್ಮನ್ನು ನಂಬಿಸಿದ್ದರು. ಅದರಂತೆ ನಮ್ಮನ್ನು ದಾಂಡೇಲಿಗೆ ಬರಲು ಸೂಚಿಸಿದ್ದರು. ನಾವು ದಾಂಡೇಲಿಗೆ ಬಂದು ಅವರನ್ನು ಸಂಪರ್ಕಿಸಿದಾಗ ಶಬ್ಬರ್ ಅಂತೋನಿ ಇಸ್ಮಾಯಿಲ್ ಕುಟ್ಟಿ ಎಂಬಾತ ನಮ್ಮನ್ನು ಬರ್ಚಿ ಬಳಿ ಬರುವಂತೆ ತಿಳಿಸಿದ್ದ. ಅದರಂತೆ ನಾವು ಭರ್ಚಿ ಬಳಿ ಬಂದಾಗ ಶಬ್ಬರ್ ಅಂತೋನಿ ನಮ್ಮ ಕಾರಿನ ಬಳಿ ಬಂದು 9 ಲಕ್ಷ ರೂಪಾಯಿ ನೀಡಿ ನಮ್ಮಿಂದ 4.50 ಲಕ್ಷ ರೂಪಾಯಿ ಕೇಳಿದ. ನಮಗೆ ನೀಡಿದ ಹಣವನ್ನು ಪರಿಶೀಲನೆ ಮಾಡುವಷ್ಟರಲ್ಲಿ ಪೊಲೀಸರು ದಾಳಿ ಮಾಡಿ ಬಂಧಿಸಿದರು’ ಎಂದು ಮಹಾರಾಷ್ಟ್ರದಿಂದ ನಕಲಿ ನೋಟುಗಳನ್ನು ಸಾಗಿಸಲು ಬಂದಿದ್ದ ನಾಲ್ವರು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ನೀಡಿದ ಮಾಹಿತಿಯನ್ನು ಅಧರಿಸಿ ಶಿವಾಜಿ ಎಂಬಾತನ ಮನೆಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದರು. ಅಲ್ಲಿ 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ 88 ಕಟ್ಟು, 2000 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಆರು ಕಟ್ಟುಗಳು, 200 ರೂಪಾಯಿ ಮುಖಬೆಲೆಯ ನಕಲಿ ನೋಟಿನ 28 ಕಟ್ಟುಗಳು, 100 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಎರಡು ಕಟ್ಟುಗಳು ಮತ್ತು ‘ಎ-4’ ಅಳತೆಯ ಹಾಳೆಯಲ್ಲಿ ಮುದ್ರಿಸಿದ್ದ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು, ಪೇಪರ್ ಕಟಿಂಗ್ ಮಷಿನ್‌ಗಳು ಪತ್ತಯಾಗಿವೆ. ಎಲ್ಲವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಧಿತ ಆರು ಜನ ಆರೋಪಿಗಳಲ್ಲಿ ಶಬ್ಬೀರ್ ಅಂತೋಣಿ ಇಸ್ಮಾಯಿಲ್ ಕುಟ್ಟಿ ಹಾಗೂ ಶಿವಾಜಿ ಶ್ರವಣ ಕಾಂಬಳೆ ದಾಂಡೇಲಿಯ ನವಶ್ರೀ ನಗರದವರು. ಇನ್ನುಳಿದ ಆರೋಪಿಗಳಾದ ಕಿರಣ್ ಮಧುಕರ ದೇಸಾಯಿ ಮತ್ತು ಗಿರೀಶ ನಿಂಗಪ್ಪ ಪೂಜಾರಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರು. ಅಮರ ಮೋಹನ್ ನಾಯ್ಕ, ಮತ್ತು ಸಾಗರ ಪುಂಡ್ಲೀಕ್ ಕುಣ್ಣೂರಕರ ಬೆಳಗಾವಿಯವರು. ಎಲ್ಲರೂ ದಾಂಡೇಲಿಗೆ ಖೋಟಾ ನೋಟುಗಳ ಖರೀದಿಗಾಗಿ ಬಂದಿದ್ದರೆಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ದಾಂಡೇಲಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್ಪಿ ಕೆ.ಎಲ್.ಗಣೇಶ ನೇತೃತ್ವದಲ್ಲಿ ಸಿ.ಪಿ.ಐ ಪ್ರಭು ಗಂಗನಹಳ್ಳಿ, ದಾಂಡೇಲಿ ಗ್ರಾಮೀಣ ಠಾಣೆಯ ಪಿ.ಎ.ಎಸ್.ಐ ಐ.ಆರ್.ಗಡ್ಡೇಕರ, ಪಿ.ಎಸ್.ಐ ಯಲ್ಲಾಲಿಂಗ ಕೊನ್ನೂರು ದಾಂಡೇಲಿ ನಗರ ಠಾಣೆಯ ಪಿ.ಎ.ಸ್‌ಐ ಯಲ್ಲಪ್ಪ ಎಸ್., ಎ.ಎಸ್.ಐ ಮಹಾವೀರ ಕಾಂಬಳೆ, ಸಿಬ್ಬಂದಿ ಉಮೇಶ್ ತುಂಬರಗಿ, ರವಿ ಚವಾಣ, ಮಂಜುನಾಥ ಶೆಟ್ಟಿ, ರೇವಪ್ಪ ಬಂಕಾಪುರ, ರೋಹಿತ, ದಯಾನಂದ ಲೋಂಡಿ, ಚಿನ್ಮಯ ಪತ್ತಾರ, ದಶರಥ ಲಕ್ಮಾಪುರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love