ದಾಖಲೆ ನೀಡುವಲ್ಲಿ ಕಾರ್ಮಿಕರನ್ನು ಸತಾಯಿಸುತ್ತಿರುವ ಪಿಎಫ್ ಕಚೇರಿಯ ಅಧಿಕಾರಿಗಳ ವಿರುದ್ಧ ಸಾಮೂಹಿಕ ಧರಣಿ ಸತ್ಯಾಗ್ರಹ

Spread the love

ದಾಖಲೆ ನೀಡುವಲ್ಲಿ ಕಾರ್ಮಿಕರನ್ನು ಸತಾಯಿಸುತ್ತಿರುವ ಪಿಎಫ್ ಕಚೇರಿಯ ಅಧಿಕಾರಿಗಳ ವಿರುದ್ಧ ಸಾಮೂಹಿಕ ಧರಣಿ ಸತ್ಯಾಗ್ರಹ

ಕೆವೈಸಿ ಹಾಗೂ ಇ ನೋಮಿ ನೇಷನ್ ಗಾಗಿ ದಾಖಲೆ ಒದಗಿಸುವ ನೆಪದಲ್ಲಿ ಕಾರ್ಮಿಕರನ್ನು ಸತಾಯಿಸುತ್ತಿರುವ ಭವಿಷ್ಯನಿಧಿ ಕಚೇರಿಯ ಅಧಿಕಾರಿಗಳ ದುರ್ವರ್ತನೆಗಳ ವಿರುದ್ದ CITU ದ.ಕ.ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ನಗರದಲ್ಲಿಂದು(28-12-2021)ಭವಿಷ್ಯನಿಧಿ ಕಚೇರಿಯೆದುರು ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.

 ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು ಕೇಂದ್ರ ಸರಕಾರ ಹಾಗೂ ಪಿಎಫ್ ಕಚೇರಿಯ ಅಧಿಕಾರಿಗಳ ವಿರುದ್ದ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.

ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು,  ಒಳ್ಳೆಯ ದಿನಗಳನ್ನು ತರುವುದಾಗಿ ಪೊಳ್ಳು ಭರವಸೆ ನೀಡಿದ ಕೇಂದ್ರದ ನರೇಂದ್ರ ಮೋದಿ ಸರಕಾರವು ನಿತ್ಯ ನಿರಂತರವಾಗಿ ದುಡಿಯುವ ವರ್ಗವನ್ನು ಶೋಷಿಸುತ್ತಾ ಬಂದಿದೆ.ಮಾತ್ರವಲ್ಲದೆ ಕಾರ್ಮಿಕ ಜಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಿ ಅವುಗಳನ್ನು ಸಂಹಿತೆಗಳನ್ನಾಗಿ ರೂಪಿಸಿ ಕಾರ್ಮಿಕ ವರ್ಗವನ್ನು ಮತ್ತೆ ಜೀತದಾಳುಗಳನ್ನಾಗಿ ಪರಿವರ್ತಿಸಲು ಹುನ್ನಾರ ನಡೆಸುತ್ತಿದೆ.ತಮ್ಮ ದುಡಿಮೆಯ ಪಾಲನ್ನು ಭವಿಷ್ಯದ ಜೀವನಕ್ಕಾಗಿ ಮೀಸಲಿರಿಸಿದ ಭವಿಷ್ಯನಿಧಿಯನ್ನು ದಾಖಲೆ ನೀಡುವ ನೆಪದಲ್ಲಿ ಕಾರ್ಮಿಕರಿಗೆ ನೀಡದೆ ಸತಾಯಿಸುತ್ತಿರುವ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಜನಾಂದೋಲನ ರೂಪಿಸಬೇಕಾಗಿದೆ.ಹಾಗೂ ಪಿಎಫ್ ಸದಸ್ಯರ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಪಡಿಸದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಸೇರಿದಂತೆ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾದೀತು* ಎಂದು ಎಚ್ಚರಿಕೆ ನೀಡಿದರು.

CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ,  ಕಾರ್ಮಿಕರ ಧೀರೋದತ್ತ ಹೋರಾಟದ ಮೂಲಕ ಜಾರಿಗೆ ಬಂದ ಭವಿಷ್ಯನಿಧಿ ಯೋಜನೆಯನ್ನು ಕೇಂದ್ರದ ನರೇಂದ್ರ ಮೋದಿ ಸರಕಾರವು ಇಲ್ಲವಾಗಿಸಲು ಕುತಂತ್ರ ಹೆಣೆಯುತ್ತಿದೆ. ಡಿಜಿಟಲೀಕರಣದ ಹೆಸರಿನಲ್ಲಿ ವ್ಯಾಪಕವಾಗಿ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಇ ನೋಮಿನೇಷನ್ ಹಾಗೂ ಕೆವೈಸಿಗಾಗಿ ದಾಖಲೆ ನೀಡಲು ಬಡಪಾಯಿ ಕಾರ್ಮಿಕರು ವಿನಾಃ ಕಾರಣ ಬೀದಿಬೀದಿ ಅಲೆದಾಟ ಮಾಡಲಾಗುತ್ತಿದೆ.ದ.ಕ.ಜಿಲ್ಲೆಯ ಬಹುಸಂಖ್ಯಾತ ಬೀಡಿ ಕಾರ್ಮಿಕರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದರೂ, ಜನಪ್ರತಿನಿಧಿಗಳು ಬಾಯಿ ತೆರೆಯುತ್ತಿಲ್ಲ  ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು,  ಭವಿಷ್ಯನಿಧಿ ಕಚೇರಿಯಲ್ಲಿ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ವಿವರಿಸುತ್ತಾ,ಇ ನೋಮಿನೇಷನ್ ಹಾಗೂ ಕೆವೈಸಿಗಾಗಿ ಒಂದು ವರ್ಷದ ಕಾಲಾವಕಾಶ ನೀಡಬೇಕು, ಪಿಎಫ್ ಸದಸ್ಯರ ದಾಖಲೆಯನ್ನು ಜಂಟಿ ಡಿಕ್ಲರೇಷನ್ ಮೂಲಕ ಸರಿಪಡಿಸಬೇಕು,ತಿದ್ದುಪಡಿಗಳನ್ನು ಆಧಾರ್ ಕಾರ್ಡ್ ಪಾನ್ ಕಾರ್ಡ್ ಮೂಲಕ ಸರಿಪಡಿಸಬೇಕು,ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅರ್ಜಿಗಳನ್ನು ಕೈಬರಹದ ಅರ್ಜಿಗಳ ಮೂಲಕ ಇತ್ಯರ್ಥಗೊಳಿಸಬೇಕು  ಎಂಬಿತ್ಯಾದಿ ಬೇಡಿಕೆಗಳನ್ನು ವಿವರಿಸಿದರು.

 ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ CITU ಜಿಲ್ಲಾ ಮುಖಂಡರೂ,ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ರಾಜ್ಯ ನಾಯಕರಾದ ಪದ್ಮಾವತಿ ಶೆಟ್ಟಿ,ರಮಣಿ ಮೂಡಬಿದ್ರೆ,ಜಯಂತಿ ಶೆಟ್ಟಿಯವರು ಮಾತನಾಡಿ ಪಿಎಫ್ ಸದಸ್ಯರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದರು.

 ಸತ್ಯಾಗ್ರಹದ ಸ್ಥಳಕ್ಕೆ ಭವಿಷ್ಯನಿಧಿ ಆಯುಕ್ತರು ಭೇಟಿ ನೀಡಿ, ಕಾರ್ಮಿಕರ ಅಹವಾಲನ್ನು ಕೇಳಿ,ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

 ಧರಣಿ ಸತ್ಯಾಗ್ರಹ ದಲ್ಲಿ CITU ಜಿಲ್ಲಾ ಮುಖಂಡರಾದ ಜಯಂತ ನಾಯಕ್,ರಾಧಾ ಮೂಡಬಿದ್ರೆ,ನೋಣಯ್ಯ ಗೌಡ, ಯೋಗೀಶ್ ಜಪ್ಪಿನಮೊಗರು, ಭಾರತಿ ಬೋಳಾರ,ಬಾಬು ದೇವಾಡಿಗ, ಬಾಬು ಪಿಲಾರ್, ವಸಂತಿ ಕುಪ್ಪೆಪದವು, ವಿಲಾಸಿನಿ,ಜಯಲಕ್ಷ್ಮಿ,ಸುಂದರ ಕುಂಪಲ, ಭವಾನಿ ವಾಮಂಜೂರು, ಲೋಲಾಕ್ಷಿ, ಗಿರಿಜಾ ಮೂಡಬಿದ್ರೆ,ಜಿಲ್ಲಾ ಕಾರ್ಮಿಕ ನಾಯಕರಾದ ಸದಾಶಿವದಾಸ್, ಸುಕುಮಾರ್ ತೊಕ್ಕೋಟು, ಬೀಡಿ ಕಂಟ್ರಾಕ್ಟ್ ದಾರರ ಸಂಘದ ನಾಯಕರಾದ ಕ್ರಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು


Spread the love