ದಾರ್ಶನಿಕರ ತತ್ವಾದರ್ಶಗಳೇ ಕಾಂಗ್ರೆಸಿನ ನೆಲೆಗಟ್ಟು: ಡಾ.ಜಿ. ಪರಮೇಶ್ವರ್
ಮಂಗಳೂರು: ಎಲ್ಲಾ ದಾರ್ಶನಿಕರ ಸದ್ಗುಣಗಳನ್ನು ಕಾಂಗ್ರೆಸ್ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಬುದ್ಧ, ಬಸವ, ಪೈಗಂಬರ್, ಬ್ರಹ್ಮಶ್ರೀ ನಾರಾಯಣಗುರು ಇಂತಹ ದಾರ್ಶನಿಕರ ತತ್ವಾದರ್ಶಗಳೇ ಕಾಂಗ್ರೆಸಿನ ನೆಲೆಗಟ್ಟು. ಆದುದರಿಂದ ಆ ಗುಣಗಳನ್ನು ಕಾಂಗ್ರೆಸಿಗರಾದ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಮಂಗಳವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಒಂದು ರಾಜಕೀಯ ಪಕ್ಷ ಮಾತ್ರವಲ್ಲ ಅದೊಂದು ತತ್ವ ಸಿದ್ದಾಂತ, ಅದೊಂದು ಅಂದೋಲನ, ಅದೊಂದು ಐತಿಹಾಸಿಕ ಚರಿತ್ರೆ, ಕಾಂಗ್ರೆಸ್ ತ್ಯಾಗ, ಬಲಿದಾನ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಅಂತಹ ದೊಡ್ಡ ಪರಂಪರೆ ಇದೆ. ಸಣ್ಣ ಪುಟ್ಟ ವೈಮನಸ್ಸನ್ನು ಮರೆತು ಜಿಲ್ಲೆಯಲ್ಲಿ ಕಾಂಗ್ರೆಸ್ ನ್ನು ಬಲಿಷ್ಠಪಡಿಸಬೇಕು ಎಂದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ. ಖಾದರ್, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಮಾಜಿ ಸಂಸದ ಬಿ.ಇಬ್ರಾಹೀಂ, ಎಐಸಿಸಿ ಕಾರ್ಯದರ್ಶಿ ಪಿ.ವಿ ಮೋಹನ್, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜಿ.ಆರ್.ಲೋಬೊ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪ್ರೊ.ರಾಧಾಕೃಷ್ಣ, ಮಾಜಿ ಮೂಡ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಸದಾಶಿವ್ ಉಳ್ಳಾಲ್, ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರುಗಳು, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರುಗಳು, ಕೆಪಿಸಿಸಿ ಮಾಜಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಕೆಪಿಸಿಸಿ ವಿವಿಧ ಘಟಕದ ಪದಾಧಿಕಾರಿಗಳು, ಬ್ಲಾಕ್ ಉಸ್ತುವಾರಿಗಳು ಮೊದಲಾದವರು ಉಪಸ್ಥಿತರಿದ್ದರು.