ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ವಂ|ಚೇತನ್ ಲೋಬೊ ಆಯ್ಕೆ

Spread the love

ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ವಂ|ಚೇತನ್ ಲೋಬೊ ಆಯ್ಕೆ

ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಮತ್ತು ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಸಮಿತಿಯ ವತಿಯಿಂದ ನೀಡಲಾಗುವ 2021 ರ ಸಾಲಿನ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ಚೇತನ್ ಲೋಬೊ ಅವರ ʼಚೇತನ ಚಿಂತನʼ ಕೃತಿ ಆಯ್ಕೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರಿನವರಾಗಿದ್ದು, ಸಂವಹನ ಹಾಗೂ ಮಾಧ್ಯಮಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅವರು ಕಪುಚಿನ್ ಸಭೆಗೆ ಸೇರಿದ ಧರ್ಮಗುರುಗಳಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡಿದ ಅನುಭವ ಇವರಿಗಿದ್ದು, ಶಿವಮೊಗ್ಗ ಧರ್ಮಕ್ಷೇತ್ರದ ಕುಟುಂಬ ವಿಕಾಸ ಕೇಂದ್ರದ ನಿರ್ದೇಶಕರಾಗಿ, ಕಪುಚಿನ್ ಶಿಕ್ಷಣ ಮಂಡಳಿ ಬೆಂಗಳೂರು ಇದರ ಕಾರ್ಯದರ್ಶೀಗಳಾಗಿ, ಉಡುಪಿ ಧರ್ಮಪ್ರಾಂತ್ಯದ ಕುಟುಂಬ ವಿಕಾಸ ಕೇಂದ್ರದ ನಿರ್ದೇಶಕರಾಗಿ, ಉಡುಪಿ ಧರ್ಮಪ್ರಾಂತ್ಯದ ಕೊಂಕಣಿ ಪಾಕ್ಸಿಕ ʼಉಜ್ವಾಡ್ʼ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಹಾಗೂ ಇನ್ನೂ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುತ್ತಾರೆ.

1990 ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ವಂ|ಚೇತನ್ ಅವರು ಕೊಂಕಣಿ, ಕನ್ನಡ ಹಾಗೂ ಇಂಗ್ಲೀಷ್ ಭಾಷೇಗಳ ನಿಯತಕಾಲಿಕಗಳಲ್ಲಿ ಲೇಖನಗಳು ಹಾಗೂ ಸಣ್ಣ ಕತೆಗಳು ಪ್ರಕಟಗೊಂಡಿವೆ. 2016-2018 ರವರೆಗೆ ಪ್ರಜಾವಾಣಿ ಕನ್ನಡ ದೈನಿಕದಲ್ಲಿ ʼಅಮೃತ ವಾಕ್ಕುʼ ಸಾಪ್ತಾಹಿಕ ಅಂಕಣ ನಡೆಸಿಕೊಟ್ಟಿರುವ ಇವರು ಮಾಧ್ಯಮ ಸಂಬಂಧಿತ ವಿಷಯಗಳಲ್ಲಿ ಮಂಗಳೂರು, ಮೈಸೂರು, ಬೆಂಗಳೂರು, ಉಡುಪಿ, ಸೇಲಮ್, ಮಧುರೈ ಇನ್ನಿತರ ಸ್ಥಳಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾಗಿರುವ ಕೃತಿ ಇವರ ಐದನೇ ಪುಸ್ತಕವಾಗಿದ್ದು ಈದಲ್ಲದೆ ʼಕಾಳ್ಜಾಚಿ ಭಾಸ್ ವೆಗ್ಳಿಚ್ʼ ಕೊಂಕಣಿ ಕಥಾ ಸಂಕಲನ, ʼನವೊ ಸಂಸಾರ್ʼ ಕೊಂಕಣಿ ಕಥಾ ಸಂಕಲನ, ʼಪಾವ್ಸಾ ಧೊಣುʼ ಕೊಂಕಣಿ ಸಂಪಾದಕೀಯಗಳ ಸಂಕಲನ, ʼಮೀಡಿಯಾʼ ಕನ್ನಡ ಮಾಧ್ಯಮ ಲೇಖನಗಳ ಸಂಕಲನಗಳು ಪ್ರಕಟಗೊಂಡಿದೆ.

ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಬಿಗ್ ಜೆ ಟಿವಿ ಪ್ರಶಸ್ತಿ ಹಾಗೂ ಇಫ್ಕಾ ರತ್ನಶ್ರೀ 2017 ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪುರಸ್ಕಾರ ರೂ 25000 ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದ್ದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ ಮಾಡಲಾಗುವುದು ಎಂದು ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಸಮಿತಿ ಸಂಚಾಲಕಿ ಆಲಿಸ್ ರೊಡ್ರಿಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love