
ದಿವ್ಯಾಂಗ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿದ ಅನಂತನಾಗ್
ದಿವ್ಯಾಂಗ ಮಕ್ಕಳನ್ನು ಬಹಳ ಪ್ರೀತಿಯಿಂದ ಸಲಹಿ, ಅವರ ಸರ್ವತ್ತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಅನಿರ್ವೇದ ಫೌಂಡೇಶನ್ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಖ್ಯಾತ ನಟ ಅನಂತನಾಗ್ ಹೇಳಿದರು.
ಅವರು ಕದ್ರಿ ಶಿವಭಾಗ್ ನಲ್ಲಿರುವ ಅನಿರ್ವೇದ ಫೌಂಡೇಶನ್ ಇದರ ಸ್ಥಳಾಂತರಿತ ನೂತನ ಕಟ್ಟಡ ಉದ್ಘಾಟಿಸಿ, ವಿಶೇಷ ಚೇತನ ಮಕ್ಕಳ ಜೊತೆಗೂಡಿ ತಮ್ಮ 75 ನೇ ಜನ್ಮದಿನವನ್ನು ಆಚರಿಸಿದರು.
ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅನಂತನಾಗ್ ಅವರು ಮಕ್ಕಳಲ್ಲಿಯೇ ದೇವರನ್ನು ಕಾಣಬೇಕೆಂಬ ಉದಾತ್ತ ಚಿಂತನೆಯನ್ನು ಆನಂದಾಶ್ರಮದಲ್ಲಿ ತಮ್ಮ ಗುರುಗಳು ಹೇಳಿಕೊಟ್ಟಿದ್ದರು. ಇಂತಹ ದಿವ್ಯಾಂಗ ಮಕ್ಕಳಿಗೆ ದಾರಿದೀಪವಾಗಿರುವ ಸಂಸ್ಥೆಯ ಮುಖ್ಯಸ್ಥರಾದ ಡಾ. ಶ್ವೇತಾ ಅವರು ಮಕ್ಕಳ ಬಾಳಿನಲ್ಲಿ ದೇವರ ರೂಪವಾಗಿ ಬಂದಿದ್ದೀರಿ. ನಿಮ್ಮ ಸೇವೆ ಇನ್ನಷ್ಟು ದಿವ್ಯ ಚೇತನ ಮಕ್ಕಳಲ್ಲಿ ಬೆಳಕಾಗಿ ಬರಲಿ. ಈ ಸಂಸ್ಥೆಯ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಡಾ. ಶ್ವೇತ ಅವರು ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಎಲ್ಲರನ್ನು ವಂದಿಸಿದರು. ಕಾರ್ಪೋರೇಟರ್ ನವೀನ್ ಡಿಸೋಜಾ ಪಾಲಿಕೆ ಮತ್ತು ವೈಯಕ್ತಿಕವಾಗಿ ಸಂಸ್ಥೆಗೆ ಅಗತ್ಯ ನೆರವನ್ನು ನೀಡಲು ಬದ್ಧ ಎಂದು ತಿಳಿಸಿದರು.ಡಾ. ರವಿಚಂದ್ರ ಶುಭ ಹಾರೈಸಿದರು.
ಅನಂತನಾಗ್ ಪತ್ನಿ ಗಾಯತ್ರಿ ನಾಗ್, ಮಗಳು ಅದಿತಿ, ಅಳಿಯ ವಿವೇಕ್, ಆತ್ಮೀಯರಾದ ಮಂಗಲ್ಪಾಡಿ ನರೇಶ್ ಶೆಣೈ, ಅಂಜನಾ ಕಾಮತ್ ಹಾಗೂ ಸಂಸ್ಥೆಯ ಮಕ್ಕಳ ಪೋಷಕರು, ಹಿತೈಷಿಗಳು ಉಪಸ್ಥಿತರಿದ್ದರು.
ದೇವಸ್ಥಾನಗಳ ಭೇಟಿ
75 ನೇ ಜನ್ಮದಿನದ ನಿಮಿತ್ತ ಖ್ಯಾತ ನಟ ಅನಂತನಾಗ್ ಅವರು ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಉಮಾಮಹೇಶ್ವರ ದೇವಸ್ಥಾನ, ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಅವರು ತಮ್ಮ ಅನಿಸಿಕೆಯನ್ನು ಲಿಖಿತವಾಗಿ ಪುಸ್ತಕದಲ್ಲಿ ದಾಖಲಿಸಿದರು.
ಇದೇ ಸಂದರ್ಭದಲ್ಲಿ ಕಟೀಲು ದೇವಸ್ಥಾನದಲ್ಲಿ ಭೋಜನ ಪ್ರಸಾದ ಸ್ವೀಕರಿಸಿದರು.
ಅನಂತನಾಗ್ ಅವರೊಂದಿಗೆ ಪತ್ನಿ ಗಾಯತ್ರಿ ನಾಗ್, ಪುತ್ರಿ ಅದಿತಿ, ಅಳಿಯ ವಿವೇಕ್, ಆತ್ಮೀಯರಾದ ಮಂಗಲ್ಪಾಡಿ ನರೇಶ್ ಶೆಣೈ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಢಾನದ ಅಧ್ಯಕ್ಷ ಗಿರಿಧರ್ ಶೆಟ್ಟಿ, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು, ಅರ್ಚಕ ವೃಂದ ಉಪಸ್ಥಿತರಿದ್ದರು.