ದಿಶಾ ಸಭೆ ನಡೆಯುವ ತನಕ ಸ್ಥಳೀಯರಿಗೆ ಟೋಲ್ ಪಡೆಯದಂತೆ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಆಗ್ರಹ

Spread the love

ದಿಶಾ ಸಭೆ ನಡೆಯುವ ತನಕ ಸ್ಥಳೀಯರಿಗೆ ಟೋಲ್ ಪಡೆಯದಂತೆ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಆಗ್ರಹ

ಉಡುಪಿ: ಫೆಬ್ರವರಿ 15ರಿಂದ ಟೋಲ್ ಬೂತ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯ ಮಾಡಿರುವ ಹಿನ್ನಲೆಯಲ್ಲಿ ಭಾನುವಾರ ಕೋಟ ಪೊಲೀಸ್ ಠಾಣೆಯಲ್ಲಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರ ಹಾಗೂ ಆರಕ್ಷಕರ ಸಭೆ ಠಾಣಾಧಿಕಾರಿಗಳ ನೇತೃತ್ವದಲ್ಲಿ ಜರುಗಿತು.

ಸಭೆಯಲ್ಲಿ ಹೆದ್ದಾರಿ ಸಮಿತಿಯ ಸದಸ್ಯರು ಇದುವರೆಗೂ ಸ್ಥಳೀಯರಿಗೆ ಇರುವ ಸುಂಕ ವಿನಾಯತಿ ಮುಂದುವರಿಸಬೇಕು ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಟೋಲ್ ಸಂಗ್ರಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಆದರೆ ನವಯುಗದ ಅಧಿಕಾರಿಗಳು ಇನ್ನು ಮುಂದೆ ಫಾಸ್ಟಾಗ್ ಕಡ್ಡಾಯವಾಗಿದ್ದು ಸ್ಥಳೀಯರಿಗೆ ರಿಯಾಯಿತಿ ನೀಡುವುದು ಅಸಾಧ್ಯ ಎಂದು ತಿಳಿಸಿದರು.

ಸಭೆಯಲ್ಲಿ ಯಾವುದೇ ಒಮ್ಮತ ಮೂಡದೆ ತದನಂತರ ಸಭೆಗೆ ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

ಈ ಸಂದರ್ಬದಲ್ಲಿ ಕೂಡ ಜಾಗೃತಿ ಸಮಿತಿ ಸದಸ್ಯರು ಫಾಸ್ಟ್ಯಾಗ್ ಕುರಿತು ಯಾವುದೇ ನಿರ್ಧಾರ ಇದ್ದರೂ ಅದು ಜಿಲ್ಲಾ ಮಟ್ಟದ ಜನಪ್ರತಿನಿಧಿಗಳ ಹಾಗೂ ಸಂಸದರ ನೇತೃತ್ವದಲ್ಲಿ ನಡೆಯುವ ಅಧಿಕಾರಿಗಳ ದಿಶಾ ಸಭೆಯಲ್ಲಿ ನಿರ್ಧಾರವಾಗಬೇಕೆ ಹೊರತು ಯಾವುದೇ ಕಾರಣಕ್ಕೂ ಏಕಾಏಕಿ ಸುಂಕ ವಸೂಲಿ ಕ್ರಮಕ್ಕೆ ಜಾಗ್ರತಿ ಸಮಿತಿಯ ಸ್ಪಷ್ಟ ವಿರೋಧವಿದ್ದು ಯಾವುದೇ ಕಾರಣಕ್ಕೂ ಸುಂಕ ವಸೂಲಿಗೆ ನಾವು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಸಂಸದರ ನೇತೃತ್ವದಲ್ಲಿ ದಿಶಾ ಸಭೆಯ ನಡೆಯುವ ತನಕ ಯಥಾಸ್ಥಿತಿ ಕಾಪಾಡುವಂತೆ ನವಯುಗ ಕಂಪೆನಯ ಪ್ರತಿನಿಧಿಗಳಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನವಯುಗ ಸಿಬಂದಿಗಳು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸೋಮವಾರ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದರು.


Spread the love