
ದುಸ್ಥಿತಿಯಲ್ಲಿ ತಿ.ನರಸೀಪುರದ ಸರ್ಕಾರಿ ಪ್ರಾಥಮಿಕ ಶಾಲೆ
ಮೈಸೂರು: ಜನ ಕಷ್ಟಪಟ್ಟು ದುಡಿದು ಸಾಲ ಮಾಡಿಯಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಏಕೆ ದಾಖಲು ಮಾಡುತ್ತಾರೆ ಎಂಬ ಪ್ರಶ್ನೆಗೆ ಜಿಲ್ಲೆಯ ತಿ.ನರಸೀಪುರ ಪುರಸಭೆ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರೆ ಉತ್ತರ ಸಿಗುತ್ತದೆ.
ಈ ಸರ್ಕಾರಿ ಶಾಲೆ ಆರಂಭವಾಗಿ 60 ವರ್ಷಗಳೇ ಕಳೆದಿವೆ. ಹೀಗಾಗಿ ಶಾಲೆಯನ್ನು ಕಾಲ ಕಾಲಕ್ಕೆ ಅಭಿವೃದ್ಧಿಗೊಳಿಸದ ಕಾರಣದಿಂದ ಶಾಲೆ ದನದ ದೊಡ್ಡಿಗಿಂತಲೂ ಕಡೆಯಾಗಿದ್ದು, ಇದೊಂದು ಸರ್ಕಾರಿ ಶಾಲೆನಾ? ಎಂಬ ಪ್ರಶ್ನೆ ಮೂಡುವುದಂತು ಸಹಜ. ಸಂಬಂಧಿಸಿದ ಅಧಿಕಾರಿಗಳ ಬೇಜವಬ್ದಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಶಾಲೆ ದುಸ್ಥಿತಿಗೆ ತಲುಪಿದೆ ಎಂದರೆ ತಪ್ಪಾಗಲಾರದು.
ಇದೀಗ ಈ ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಬೋಧನೆಯಲ್ಲಿ ನಡೆಯುತ್ತಿದ್ದು, ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಕೂಡ ಶಾಲೆಯ ದುರಸ್ಥಿ ಆಗಿಲ್ಲ. ಬಡ ವಿದ್ಯಾರ್ಥಿಗಳು ಕಲಿಯುವ ಶಾಲೆ ಆಗಿರುವುದರಿಂದ ಶಿಕ್ಷಣ ಇಲಾಖೆ ಸಮೇತವಾಗಿ ಚುನಾಯಿತ ಪ್ರತಿನಿಧಿಗಳಿಗೂ ತಾತ್ಸಾರ ಮನೋಭಾವ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.
ಶಾಲೆಯ ಸ್ಥಿತಿ ಹೇಗಿದೆ ಎಂದರೆ ಶಾಲಾ ಕಟ್ಟಡದ ಛಾವಣಿ ಕಿತ್ತು ಬೀಳುತ್ತಿದೆ. ಮಳೆ ಬಂದರೆ ಕೊಠಡಿಗಳಲ್ಲಿ ನೀರು ಸೋರುತ್ತವೆ. ಶಾಲೆಯ ಸುತ್ತಲೂ ಗಿಡ ಬಳ್ಳಿ ಪೂದೆ ಬೆಳೆದು ನಿಂತ್ತಿದೆ. ಶಾಲೆಯ ಪಕ್ಕದ ಚರಂಡಿ, ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ ಇದರಿಂದ ಸೊಳ್ಳೆ ಕಾಟವನ್ನು ಎದುರಿಸಬೇಕಾಗಿದೆ. ಶೌಚಾಲಯದ ಬಗ್ಗೆ ಹೇಳುವಂತಿಲ್ಲ. ಶೌಚಾಲಯ ನಿರ್ಮಾಣ ಮತ್ತು ಬಳಕೆಗೆ ಸ್ಚಚ್ಚ ಭಾರತ ಅಭಿಯಾನದಡಿಯಲ್ಲಿ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಹಳೆ ಕಾಲದ ಹಾಗೂ ಭದ್ರತೆ ಇಲ್ಲದ ಕಲ್ನಾರ್ ಶೀಟ್ ನ ಶೌಚಾಲಯವನ್ನೇ ಹೆಣ್ಣು ಮಕ್ಕಳು ಬಳಸಬೇಕಾಗಿದೆ. ಜತೆಗೆ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿ ಇಲ್ಲದಾಗಿದೆ.
ತಿ.ನರಸೀಪುರ ಪಟ್ಟಣದ ಹೃದಯ ಭಾಗದಲ್ಲಿರುವ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯೇ ಈ ಪರಿಸ್ಥಿತಿ ಹೀಗಾಗದೆ ಗ್ರಾಮಾಂತರ ಪ್ರದೇಶದ ಶಾಲೆಗಳ ಪರಿಸ್ಥಿತಿ ಹೇಗಿರಬಾರದು? ಇನ್ನಾದರೂ ಸಂಬಂಧಿಸಿದವರು ಈ ಶಾಲೆಯತ್ತ ಗಮನಹರಿಸಿ ಶಾಲೆಯ ಅಭಿವೃದ್ಧಿಗೆ ಗಮನಹರಿಸಬೇಕಾಗಿದೆ. ಇಲ್ಲದೆ ಹೋದರೆ ಸರ್ಕಾರಿ ಶಾಲೆ ಅವನತಿಗೆ ಹೋಗುವುದು ಖಚಿತವಾಗಿದೆ. ಸರ್ಕಾರಿ ಶಾಲೆಗಳ ಬಗ್ಗೆ ಮಾರುದ್ಧ ಭಾಷಣ ಮಾಡುವವರು ಅವುಗಳ ಅಭಿವೃದ್ಧಿಗೆ ಶ್ರಮವಹಿಸುವುದು ಅಷ್ಟೇ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಶಾಲೆ ಅಭಿವೃದ್ಧಿ ಕಾಣುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.