
ದೇಗುಲದ ಕಾಣಿಕೆ ಹುಂಡಿಯಲ್ಲಿ ದೇವರಿಗೆ ಪತ್ರ
ಚಾಮರಾಜನಗರ: ಭಕ್ತರು ಇತ್ತೀಚಿಗೆ ದೇವರ ಕಾಣಿಕೆ ಹುಂಡಿಗಳಲ್ಲಿ ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ ಕಾಗದದ ಪತ್ರಗಳನ್ನು ಹಾಕಿ ಮನವಿ ಮಾಡಿಕೊಳ್ಳುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಇತ್ತೀಚೆಗೆ ಚಾಮರಾಜೇಶ್ವರ ದೇಗುಲದ ಹುಂಡಿಯಲ್ಲಿ ಒಂದಷ್ಟು ವಿಚಿತ್ರ ಪತ್ರಗಳು ಸಿಕ್ಕಿದ್ದವು. ಅದೇ ರೀತಿಯಲ್ಲಿ ಇದೀಗ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಲ್ಲಿ ಮತ್ತೊಂದು ವಿಚಿತ್ರ ರೀತಿಯ ಪತ್ರ ಸಿಕ್ಕಿದ್ದು, ಈ ರೀತಿಯಲ್ಲಿಯೂ ದೇವರಿಗೆ ನಿವೇದನೆ ಮಾಡುತ್ತಾರಾ ಎಂದು ಜನ ಅಚ್ಚರಿಯ ಕಣ್ಣಿನಿಂದ ನೋಡುತ್ತಿದ್ದಾರೆ.
ಯುವತಿಯೊಬ್ಬಳು ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು ಎಂದು ಪ್ರೇಮಿಯೊಬ್ಬಳು ದೇವರಿಗೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಬರೆದು ಹಾಕಿರುವುದು ಬೆಳಕಿಗೆ ಬಂದಿದೆ. ದೇವರಿಗೆ ಹರಕೆಯಾಗಿ ಹುಂಡಿಗೆ ಹಣವನ್ನು ಹಾಕುವುದು ಮಾಮೂಲಿಯಾಗಿದೆ. ಆದರೆ ಈ ರೀತಿಯಾಗಿ ಚೀಟಿಗಳನ್ನು ಬರೆದು ಹಾಕುತ್ತಿರುವುದು ಇತ್ತೀಚೆಗೆ ಅಲ್ಲಲ್ಲಿ ಕಾಣಸಿಗುತ್ತಿರುವುದು ಅಚ್ಚರಿ ಮೂಡಿಸಿದೆ.