
ದೇವಸ್ಥಾನ ನಿರ್ಮಾಣ ಕಾರ್ಯ ಜೀವನದ ಅತ್ಯದ್ಭುತ ಅವಕಾಶ – ಆನಂದ ಸಿ ಕುಂದರ್
- ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂಪೂರ್ಣ ಶಿಲಾಮಯ ಹೆಮ್ಮಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಿ ಉದ್ಯಮಿ ಆನಂದ ಸಿ ಕುಂದರ್
ಕುಂದಾಪುರ: ಯಾರ ಕೈಯ್ಯಿಂದ ದೇವಸ್ಥಾನ ನಿರ್ಮಾಣ ಆಗಬೇಕು ಎನ್ನುವುದನ್ನು ದೇವರೇ ನಿರ್ಧರಿಸುತ್ತಾನೆ. ದೇವಸ್ಥಾನ ನಿರ್ಮಿಸುವ ಪುಣ್ಯ ಕಾರ್ಯ ಜೀವನದಲ್ಲಿ ಸಿಗುವ ಅತ್ಯದ್ಭುತ ಅವಕಾಶ. ಎಲ್ಲರೂ ಒಗ್ಗಟ್ಟಿನಿಂದ ಭಾಗಿಯಾಗುವ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ ಎಂದು ಕೋಟ ಗೀತಾನಂದ ಫೌಂಡೇಶನ್ನ ಪ್ರವರ್ತಕ, ಉದ್ಯಮಿ ಆನಂದ ಸಿ ಕುಂದರ್ ಹೇಳಿದರು.
ಗುರುವಾರ ಬೆಳಿಗ್ಗೆ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂಪೂರ್ಣ ಶಿಲಾಮಯ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಬಹಳಷ್ಟು ವರ್ಷಗಳಿಂದ ಹೆಮ್ಮಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಜೀರ್ಣೋದ್ದಾರಗೊಳ್ಳಬೇಕು ಎನ್ನುವುದು ಎಲ್ಲರ ಅಭಿಲಾಷೆಯಾಗಿತ್ತು. ಈಗಾಗಲೇ ಜೀರ್ಣೋದ್ದಾರ ಕಾರ್ಯಕ್ಕೆ ಸಾಕಷ್ಟು ಪ್ರಯತ್ನ ಪಟ್ಟರೂ ಕಾಲ ಕೂಡಿ ಬಂದಿರಲಿಲ್ಲ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಈಗ ಆ ಸಮಯ ಬಂದಿದೆ. ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಎಲ್ಲರಿಗೂ ಜವಾಬ್ದಾರಿ ಇದೆ. ದೇವರ ಗರ್ಭಗುಡಿ, ಪೌಳಿ, ಹೆಬ್ಬಾಗಿಲು ನಿರ್ಮಾಣಕ್ಕೆ ಸರಿಸುಮಾರು ನಾಲ್ಕು ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ದೇವತಾ ಕಾರ್ಯಕ್ಕೆ ಸರ್ಕಾರದಿಂದಲೂ ಆರ್ಥಿಕ ಸಹಾಯ ಬೇಕಾಗುತ್ತದೆ. ಎಲ್ಲರೂ ಕೈಜೋಡಿಸಿದರೆ ಮಾತ್ರ ಸಾಧ್ಯ. ಸಂಕಲ್ಪದಂತೆ ಆದಷ್ಟು ಬೇಗ ಲಕ್ಷ್ಮೀನಾರಾಯಣ ದೇವಸ್ಥಾನ ಜೋರ್ಣೋದ್ದಾರ ಕಾರ್ಯ ಸಾಂಗವಾಗಿ ನೆರವೇರಲಿ ಎಂದರು.
ಉದ್ಯಮಿಗಳಾದ ಕುಶಲ್ ಶೆಟ್ಟಿ, ಜಗದೀಶ್ ಶೆಟ್ಟಿ, ಧಾರ್ಮಿಕ ಮುಖಂಡರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಭಟ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಯು. ಸತ್ಯನಾರಾಯಣ್ ಶೇರುಗಾರ್, ಕಾರ್ಯದರ್ಶಿ ಹರೀಶ್ ಭಂಡಾರಿ, ತಂತ್ರಿ ಸೋಮಯಾಜಿ, ದೇವಸ್ಥಾನ ಅರ್ಚಕರಾದ ನರಸಿಂಹ ಮೂರ್ತಿ, ಮೊಗವೀರ ಸಂಘಟನೆಯ ಉದಯ್ ಕುಮಾರ್ ಹಟ್ಟಿಯಂಗಡಿ, ದಿನೇಶ್ ಕಾಂಚನ್, ಭಾಸ್ಕರ್ ಸಿ ಮೊಗವೀರ, ಆಡಳಿತ ಮಂಡಳಿಯ ಸದಸ್ಯರು, ಜೀರ್ಣೋದ್ದಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.