ದೇಶಕ್ಕಾಗಿ ಬದ್ದತೆ ಹಾಗೂ ಪ್ರೀತಿ ನೀಡೋಣ – ಸು. ರಾಮಣ್ಣ

Spread the love

ದೇಶಕ್ಕಾಗಿ ಬದ್ದತೆ ಹಾಗೂ ಪ್ರೀತಿ ನೀಡೋಣ – ಸು. ರಾಮಣ್ಣ

ಕುಂದಾಪುರ: ದೇಶಕ್ಕಾಗಿ ನಾವು ಬದ್ಧತೆ ಹಾಗೂ ಪ್ರೀತಿಯನ್ನು ಕೊಟ್ಟಾಗ ದೇಶವೂ ನಮಗೆ ಎಲ್ಲವನ್ನು ಕೊಡುತ್ತದೆ ಎನ್ನುವ ನಂಬಿಕೆಗಳಿರಬೇಕು. ನಾವು ದೇಶಕ್ಕೆ ಕೊಡವುದೇ ಪ್ರಾಮುಖ್ಯವಾಗಬೇಕೇ ಹೊರತು ದೇಶ ನಮಗೇನು ಕೊಟ್ಟಿದೆ ಎನ್ನುವುದು ಪ್ರಾಮುಖ್ಯವಾಗಬಾರದು. ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಳ್ಳುವ ಗುರಿಯನ್ನು ಇರಿಸಿಕೊಂಡು ಸಾಧನೆ ಮಾಡುವವರೇ ಭವಿಷ್ಯದ ಸಾಧಕರಾಗುತ್ತಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ್ ಸು.ರಾಮಣ್ಣ ಹೇಳಿದರು.

ಕೋಟೇಶ್ವರದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಗುರುಕುಲ ನಿಲಯವಾಸಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.

ನಮ್ಮಲ್ಲಿನ ಬಾಹ್ಯ ಸೌಂದರ್ಯ ಹಾಗೂ ಅಲಂಕಾರಗಳು ನಮ್ಮನ್ನು ಶಾಶ್ವತವಾಗಿ ಗುರುತಿಸುವುದಿಲ್ಲ. ನಮ್ಮಲ್ಲಿನ ವ್ಯಕ್ತಿತ್ವ ಹಾಗೂ ಬದ್ಧತೆಗಳೇ ನಮ್ಮನ್ನು ಶಾಶ್ವತವಾಗಿ ಗುರುತಿಸುತ್ತದೆ. ಸಮಾಜಮುಖಿಯಾಗಿ ಬದುಕುವ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರೀಯತೆಯ ಸ್ವಚ್ಚ ಪರಿಕಲ್ಪನೆಗಳು ಹಾಗೂ ಶುಭ್ರ ವ್ಯಕ್ತಿತ್ವಗಳು ಅಂತರ್ಮುಖಿಯಾಗಿರಬೇಕು ಎಂದರು.

ಪ್ರಕೃತಿಯ ನಿರ್ಮಲ ವಾತಾವರಣ ಓದುವ ಆಸಕ್ತಿ ಇರುವ ಮಕ್ಕಳ ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ವಕ್ವಾಡಿ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿಯ ವಾತಾವರಣ ಇದೆ. ದೇಶದ ಎಲ್ಲ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ದೊರಕುವಂತೆ, ವಿಶ್ವವೇ ಮೆಚ್ಚುವಂತಹ ಭಾರತೀಯ ಸಂವಿಧಾನವನ್ನು ರಚಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಜಗತ್ತಿಗೆ ಭಾರತೀಯ ಸಂಸ್ಕೃತಿ ಹಾಗೂ ಸಾರ್ವಭೌಮತೆಯ ಶ್ರೇಷ್ಠತೆಯನ್ನು ಸಾರಿದ ಸ್ವಾಮಿ ವಿವೇಕಾನಂದರು ನಮಗೆ ನಿತ್ಯ ಸ್ಮರಣೀಯರಾಗಬೇಕು ಎಂದು ಸು.ರಾಮಣ್ಣ ಹೇಳಿದರು.

ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ , ಅನುಪಮಾ ಎಸ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ನ ರಾಷ್ಟ್ರೀಯ ಟ್ರಸ್ಟಿ ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಗುರುಕುಲ ಪಬ್ಲಿಕ್ ಸ್ಕೂಲ್ ವಿಶ್ವಸ್ಥ ಮಂಡಳಿ ಸದಸ್ಯ ರಾಜೇಶ್ ಕೆ.ಸಿ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಕೆ.ಮೋಹನ್ ಇದ್ದರು.


Spread the love