ದೇಶಕ್ಕೆ ನರೇಂದ್ರ ಮೋದಿ ನೇತೃತ್ವವನ್ನು ಯಾರಿಗೂ ಅಳಿಸಲು ಸಾಧ್ಯವಿಲ್ಲ – ಸಂಸದ ಬಿ.ವೈ ರಾಘವೇಂದ್ರ

Spread the love

ದೇಶಕ್ಕೆ ನರೇಂದ್ರ ಮೋದಿ ನೇತೃತ್ವವನ್ನು ಯಾರಿಗೂ ಅಳಿಸಲು ಸಾಧ್ಯವಿಲ್ಲ – ಸಂಸದ ಬಿ.ವೈ ರಾಘವೇಂದ್ರ

ಕುಂದಾಪುರ: ದೇಶಕ್ಕೆ ನರೇಂದ್ರ ಮೋದಿ ನೇತೃತ್ವವನ್ನು ಯಾರಿಗೂ ಅಳಿಸಲು ಸಾಧ್ಯವಿಲ್ಲ. 2024 ಕ್ಕೆ ಮೋದಿಯವರನ್ನು ಮತ್ತೆ ಅದೇ ಜಾಗದಲ್ಲಿಯೇ ಪ್ರತಿಷ್ಠಾಪನೆ ಮಾಡುತ್ತೇವೆ. ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸುತ್ತಾರೆ. ಎಲ್ಲರೂ ಎಚ್ಚರಿಕೆ ತಪ್ಪದೇ ಕೆಲಸ ಮಾಡಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದರು.

ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ವತಿಯಿಂದ ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಹಿರಿಯ ಕಾರ್ಯಕರ್ತರ ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳ ಸಂಯುಕ್ತ ಸಮಾವೇಶದಲ್ಲಿ ಅವರು ಮಾತನಾಡಿದರು.

ವಾಜಪೇಯಿಯವರು ಕೊಟ್ಟಿರುವ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಲ್ಲಿ ಎಡವಿದ್ದರಿಂದ ನಾವು ಅಧಿಕಾರ ಕಳೆದುಕೊಳ್ಳಬೇಕಾಯಿತು. ಆ ತಪ್ಪು ಮತ್ತೊಮ್ಮೆ ಆಗದ ರೀತಿಯಲ್ಲಿ ಎಚ್ಚರ ವಹಿಸಿಕೊಂಡು ದೇವದುರ್ಲಭ ಕಾರ್ಯಕರ್ತರಾದ ನೀವೆಲ್ಲರೂ ಮನೆ-ಮನೆ ಹೋಗಿ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ತಿಳಿ ಹೇಳುವ ಕೆಲಸ ಮಾಡಬೇಕು. ಮನಸಾರೆ ಕೆಲಸ ಮಾಡುವ ಕಾರ್ಯಕರ್ತರು ಬೇರಾವುದೇ ಪಕ್ಷದಲ್ಲಿಲ್ಲ. ಅದು ನಮ್ಮ ಪಕ್ಷದಲ್ಲಿ ಮಾತ್ರ ಎಂದರು.

ಗ್ಯಾರಂಟಿ ಕಾರ್ಡ್ಗಳನ್ನು ಹಂಚಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ನೂರಾರು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಆದರೆ ಮತ ಪಡೆಯುವುದಕ್ಕೋಸ್ಕರ ಕಾರ್ಯಕ್ರಮ ಮಾಡಲಿಲ್ಲ. ಸಾಮಾಜಿಕ ನ್ಯಾಯ ಕೊಡುವುದಕ್ಕಾಗಿ ಭಾಗ್ಯ ಲಕ್ಷ್ಮೀ ಯೋಜನೆ, ವೃದ್ದಾಪ್ಯ ವೇತನ, ಕೃಷಿ ಸಮ್ಮಾನ್ ಯೋಜನೆಯಂತಹ ದುಡಿದು ತಿನ್ನುವ ಯೋಜನೆಗಳನ್ನು ತಂದಿದ್ದೇವೆ. ಷರತ್ತು ವಿಧಿಸಿ ಸರ್ಕಾರಿ ಬಸ್ ಅಲ್ಲಿ ಹೋಗುವ ಮಹಿಳೆಯರಿಗೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲರೂ ಮತ ಹಾಕಿದ್ದಾರೆ. ಖಾಸಗಿ ಬಸ್ಗಳಲ್ಲು ಓಡಾಡುವ ಮಹಿಳೆಯರಿಗೂ ಉಚಿತ ವ್ಯವಸ್ಥೆ ಮಾಡಬೇಕು ಎಂದರು.

ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅನ್ನಭಾಗ್ಯ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಕಾಂಗ್ರೆಸ್ ಮುಖಂಡರು ಗ್ಯಾರಂಟಿ ಕಾರ್ಡ್ಗಳನ್ನು ಬಿಡುಗಡೆ ಮಾಡುವಾಗ ಮೋದಿಯವರನ್ನು ಕೇಳಿ ಬಿಡುಗಡೆ ಮಾಡಿದ್ದಾರಾ ಎಂದು ಪ್ರಶ್ನಿಸಿ ಸಂಸದರ ಬಿವೈಆರ್, ಇನ್ನು ಹತ್ತು ದಿನ ಕಾಯುತ್ತೇವೆ. ಹತ್ತು ದಿನಗಳೊಳಗೆ 10 ಕೆಜಿ ಅಕ್ಕಿ ಕೊಟ್ಟಿಲ್ಲ ಎಂದರೆ ನಾವೆಲ್ಲರೂ ಬೀದಿಗಿಳಿದು ಹೋರಾಡೋಣ ಎಂದರು.

ತುಳಸಿ ಕಟ್ಟೆಗಳು ಶಿಲುಬೆಯಾಗಿ ಪರಿವರ್ತನೆಯಾಗುತ್ತಿದೆ:
ರಾಜ್ಯ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸು ತೆಗೆಯುವ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಎಷ್ಟೋ ಮನೆಯಲ್ಲಿರುವ ತುಳಸಿ ಕಟ್ಟೆಗಳು ಶಿಲುಬೆಯಾಗಿ ಪರಿವರ್ತನೆಯಾಗುತ್ತಿದೆ. ಮತಾಂತರಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬಲವಂತದ ಮತಾಂತರವನ್ನು ಯಾರು ಮಾಡುತ್ತಾರೆ ಅವರಿಗೆ ಕಡಿವಾಣ ಹಾಕುವ ಕೆಲಸ ಬಿಜೆಪಿ ಮಾಡಿತ್ತು. ಆದರೆ ಅದನ್ನು ತೆಗೆಯುವ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿರುವುದು ದುರದೃಷ್ಟಕರ ಎಂದರು.

ಬೈಂದೂರು ಸೋಲಬಾರದು!:
ಸರ್ಕಾರ ಸೋತಿರಬಹುದು. ಆದರೆ ಅಭಿವೃದ್ದಿಯ ವಿಚಾರದಲ್ಲಿ ಬೈಂದೂರು ಸೋಲಬಾರದು. ಆ ದೃಷ್ಠಿಯಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಯಡಿಯೂರಪ್ಪನವರ ಅವಧಿಯಲ್ಲಿ 80 ಕೋಟಿ ಹಣವನ್ನು ಮರವಂತೆ ಬಂದರು ಅಭಿವೃದ್ದಿಗೆ ನೀಡಲಾಗಿದೆ. ಯಾವುದೇ ರೀತಿಯಲ್ಲಿ ಅದನ್ನು ತಡೆ ಹಿಡಿಯುವ ಕೆಲಸ ಆಗಬಾರದು. ಹಣವನ್ನು ಬಿಡುಗಡೆ ಮಾಡಲು ಸಹಕಾರ ಬೇಕು ಎಂದಿದ್ದೇನೆ. ಈ ಬಗ್ಗೆ ಯಾರೂ ದೃತಿಗೆಡುವುದು ಬೇಡ. ಆಡಳಿತ ಪಕ್ಷದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ. ಶಾಸಕರಾದ ಗುರುರಾಜ್ ಗಂಟಿಹೊಳೆ ಮತ್ತು ನಾನು ಜೋಡೆತ್ತುಗಳಾಗಿ ಕ್ಷೇತ್ರದ ಸವಾಂಗೀಣ ಅಭಿವೃದ್ದಿಗೆ ಗಮನ ಕೊಡುತ್ತೇವೆ ಎಂದು ಸಂಸದ ಬಿವೈಆರ್ ಭರವಸೆ ನೀಡಿದರು.

ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟಾಗ ಎಲ್ಲರೂ ಹಿಂದೆ ಮುಂದೆ ನೋಡದೆ ಹೋರಾಟ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ. ಏನೂ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿದ ಕಾರ್ಯಕರ್ತರನ್ನು ತಲುಪಲು ಸಾಧ್ಯವಾಗಿರಲಿಲ್ಲ. ಚುನಾವಣೆಯ ಬಳಿಕವೂ ಗ್ರಾಮ ಮಿಲನ್ ಹೆಸರಿನೊಂದಿಗೆ ಕಾರ್ಯಕರ್ತರ ಭೇಟಿ ಕಾರ್ಯಕ್ರಮವನ್ನು ಮುಂದುವರೆಸುತ್ತಿದ್ದೇನೆ. ಪಕ್ಷ-ಸಂಘಟನೆಗೆ ಪೂರಕವಾಗುವ ಕೆಲಸಗಳನ್ನು ಮಾಡುವುದರ ಜೊತೆಗೆ ಬೈಂದೂರು ಕ್ಷೇತ್ರದಲ್ಲಿ ಹಿಂದಿನ ಕಹಿ ಘಟನೆಗಳಂತೆ ಬಣ ರಾಜಕೀಯಕ್ಕೆ ಅವಕಾಶ ಕೊಡದೆ ಒಗ್ಗಟ್ಟಿನಿಂದ ಪಕ್ಷವನ್ನು ಬೆಳೆಸಲು ಮತ್ತು ಸಮೃದ್ದ ಬೈಂದೂರಿಗೆ ನಿಮ್ಮೆಲರ ಸಹಕಾರ ಬೇಕು ಎಂದು ಕಾರ್ಯರ್ತರ ಬಳಿ ಮನವಿ ಮಾಡಿಕೊಂಡರು.

ಅನೇಕ ಮಂದಿ ಹಿರಿಯ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿನ ಲೋಪಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಶೆಟ್ಟಿ, ಪ್ರಮುಖರಾದ ಪ್ರಿಯದರ್ಶಿನಿ ದೇವಾಡಿಗ, ಮಾಲತಿ ನಾಯ್ಕ್, ಆನಂದ ಖಾರ್ವಿ, ಸಂತೋಷ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.


Spread the love