
ದೇಶಕ್ಕೆ ಶಿವಾಜಿ ಕೊಡುಗೆ ಅಪಾರ: ಎಲ್.ನಾಗೇಂದ್ರ
ಮೈಸೂರು: ಭಾರತ ದೇಶದ ಇತಿಹಾಸಕ್ಕೆ ಹಾಗೂ ದೇಶ ಹಿಂದೂ ರಾಷ್ಟ್ರವಾಗಿ ಉಳಿಯಲು ಶಿವಾಜಿ ಮಹಾರಾಜರ ಕೊಡುಗೆ ಬಹಳಷ್ಟಿದೆ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಛತ್ರಿಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು. ಶಿವಾಜಿ ಅವರ ಜನನ ಈ ದೇಶದಲ್ಲಿ ಆಗದಿದ್ದರೆ ಭಾರತ ದೇಶದ ರೂಪರೇಷೆ ಬೇರೆಯೇ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಸ್ವಾಭಿಮಾನದ ಶ್ರೀಮಂತಿಕೆಯಿರುವ ಶಿವಾಜಿ ಪರಂಪರೆಯ ಜನರು ಶೈಕ್ಷಣಿಕವಾಗಿ ಆರ್ಥಿಕವಾಗಿ ಮೇಲೆ ಬರಬೇಕು. ರಾಜಕೀಯವಾಗಿ ಬೆಳೆಯಬೇಕು ಹಾಗೂ ಉನ್ನತ ಹುದ್ದೆಗಳನ್ನು ಏರಬೇಕು. ಇದಕ್ಕೆ ಬೇಕಾದ ಸೌಲಭ್ಯವನ್ನು ಸರ್ಕಾರದಿಂದ ಕೊಡಿಸುವಲ್ಲಿ ನಾನು ಶ್ರಮಿಸುತ್ತೇನೆ. ಈ ಸಮಾಜವನ್ನು ೩ಬಿ ಇಂದ ೨ಗೆ ತರುವ ನಿಮ್ಮ ಬೇಡಿಕೆಯನ್ನು ಸ್ವೀಕರಿಸುತ್ತಾ ಇದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಮೇಯರ್ ಶಿವಕುಮಾರ್ ಮಾತನಾಡಿ, 500 ವರ್ಷಗಳ ನಂತರ ಶಿವಾಜಿ ಬಂದ ಮೇಲೆ ದೆಹಲಿಯಲ್ಲಿ ಹಿಂದೂ ಧ್ವಜದ ಹಾರಾಟ ಸಾಧ್ಯವಾಗಿದೆ. ನಾವು ಹಿಂದುಗಳಾಗಿ ಉಳಿದಿರುವುದು ಮತ್ತು ಹಿಂದುತ್ವದ ಧ್ವಜದ ಹಾರಾಟ ಸಾಧ್ಯವಾಗಿರುವುದು ಶಿವಾಜಿ ಮಹಾರಾಜರಿಂದ ಎಂದು ಹೇಳಿದರು.
ಜಗತ್ತಿನ ಶ್ರೇಷ್ಠ ವೀರರಲ್ಲಿ ಶಿವಾಜಿಯೂ ಒಬ್ಬರು. ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದಿದ್ದರೆ ಕಾಶಿಗೆ ಕಳೆ ಇರುತ್ತಿರಲ್ಲಿಲ್ಲ ಎಂದು ದೆಹಲಿಯ ಪರಮಾನಂದ ಎಂಬ ಕವಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಶಿವಾಜಿ ಜಾತಿಗೆ ಸೀಮಿತವಾದವರಲ್ಲ. ಹಿಂದೂ ಧರ್ಮ ಉಳಿಸಲು ಹೋರಾಡಿದವರು ಎಂದು ತಿಳಿಸಿದರು.
ಮೈಸೂರಿನಲ್ಲಿ ಶಿವಾಜಿ ಮಹಾರಾಜರ ಪುತ್ತಳಿ ಸ್ಥಾಪಿಸುವ ನಿಮ್ಮ ಮನವಿಯನ್ನು ಸ್ವೀಕರಿಸುತ್ತಾ ಮಹಾನಗರ ಪಾಲಿಕೆಯಿಂದ ಸಾಧ್ಯವಾಗುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರಂಗಕರ್ಮಿ ಎನ್.ವಿ.ರಮೇಶ್ ಮಾತನಾಡಿ, ದೇಶದಲ್ಲಿ ಹಿಂದುತ್ವ ರಕ್ಷಿಸಿದವರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖರು. ಭಾರತದ ಸಂಸ್ಕೃತಿ ಐಕ್ಯತೆಗೆ ಕೊಡುಗೆ ಕೊಟ್ಟ ಶಿವಾಜಿ ಅವರು ಮರಾಠ ಸಾಮ್ರಾಜ್ಯದ ಸಂಸ್ಥಾಪಕರು. ೧೬೭೪ರಲ್ಲಿ ಪಟ್ಟಾಭಿಷೇಕವಾದ ಮೇಲೆ ಹಿಂದುಸ್ತಾನ ಒಗ್ಗೂಡಿಸುವಲ್ಲಿ ಶ್ರಮಿಸಿದರು. ಧಾರ್ಮಿಕ ಚಿಂತನೆಗಳನ್ನು ಭೋದಿಸಿದ್ದ ತಾಯಿ ಜೀಜಾಬಾಯಿ, ಸದಾ ಸತ್ಯಕ್ಕೆ ಹೋರಾಡು, ಯಾವುದೇ ಆಹ್ವಾನಕ್ಕಾಗಿ ಆಸೆ ಪಡಬೇಡ, ನಿರ್ಭೀತನಾಗಿರು ಎನ್ನುತ್ತಾ ಆದರ್ಶದಪ್ರಾಯ ಕಥೆಗಳನ್ನು ಹೇಳುತ್ತಿದ್ದರು. ಇದರಿಂದ ಛತ್ರಪತಿ ಶಿವಾಜಿ ಚಿಕ್ಕವಯಸ್ಸಿನಿಂದಲೇ ರಾಜನಾಗಬೇಕೆಂಬ ಆಸೆ ಹೊಂದಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಮಾಜಿ ಶಾಸಕ ಮಾರುತಿ ರಾವ್ ಪವಾರ್, ಪಾಲಿಕೆ ಸದಸ್ಯೆ ಶೋಭಾ ಹಾಗೂ ಛತ್ರಪತಿ ಶ್ರೀ ಶಿವಾಜಿ ಜಯಂತೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.