ದೇಶದಲ್ಲಿ ಇನ್ನೊಬ್ಬ ಆಸ್ಕರ್ ಹುಟ್ಟಲು ಸಾಧ್ಯವಿಲ್ಲ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

Spread the love

ದೇಶದಲ್ಲಿ ಇನ್ನೊಬ್ಬ ಆಸ್ಕರ್ ಹುಟ್ಟಲು ಸಾಧ್ಯವಿಲ್ಲ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ಅಭಿವೃದ್ದಿಯ ವಿಚಾರದಲ್ಲಿ ಜಿಲ್ಲೆಗೆ ನಾವು ಕೋಟ್ಯಾಂತರ ರೂಪಾಯಿ ಅನುದಾನ ತಂದಿದ್ದಿದ್ದರೆ ಅದಕ್ಕೆ ಮೂಲ ಕಾರಣ ಆಸ್ಕರ್ ಫೆರ್ನಾಂಡಿಸ್. ಏನೇ ಅಭಿವೃದ್ದಿ ಕೆಲಸ ಮಾಡಿದರೂ ಯಾವುದಕ್ಕೂ ಪ್ರಚಾರ ಬಯಸದ ಪ್ರಾಮಾಣಿಕ ರಾಜಕಾರಣಿ ಆಸ್ಕರ್ ಅವರ ನಿಧನ ನಮಗೆಲ್ಲರಿಗೂ ತುಂಬಲಾರದ ನಷ್ಟ. ಬಹುಶಃ ದೇಶದಲ್ಲಿ ಇನ್ನೊಬ್ಬ ಆಸ್ಕರ್ ಹುಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಮಂಗಳವಾರ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಯಾವುದೇ ರೀತಿಯ ಅಹಂಕಾರವಿಲದ, ಯಾವುದೇ ಸಂದರ್ಭದಲ್ಲೂ ಸಿಟ್ಟು ಮಾಡದಂತಹ ವ್ಯಕ್ತಿಯನ್ನು ನನ್ನ ಜೀವಮಾನದಲ್ಲಿ ನಾನು ನೋಡಿದಿದ್ದರೆ ಅದು ಆಸ್ಕರ್ ಫೆರ್ನಾಂಡಿಸ್ ಮಾತ್ರ. ಸಣ್ಣ ಹುದ್ದೆಯಿಂದ ಅತೀ ದೊಡ್ಡ ಹುದ್ದೆಗೆ ಹೋದರೂ ಪ್ರಾರಂಭದಲ್ಲಿ ತಾವು ಹೇಗಿದ್ದರೊ ಅಂತ್ಯದವರೆಗೂ ಅದೇ ರೀತಿಯ ಸ್ವಭಾವವನ್ನು ಹೊಂದಿದ್ದ ಇನ್ನೋರ್ವ ರಾಜಕೀಯ ನಾಯಕನನ್ನು ನಾವು ಕಾಣಲು ಸಾಧ್ಯವಿಲ್ಲ.

ದೆಹಲಿಯಲ್ಲಿ ಸಚಿವರನ್ನೊ, ಸಂಸದರನ್ನೊ ಭೇಟಿ ಮಾಡಬೇಕಿದ್ದರೆ ನಾವು ಸಮಯವನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ ಇವ್ಯಾವುದು ಇಲ್ಲದೇ ಕಟ್ಟಕಡೆಯ ವ್ಯಕ್ತಿಗೂ ಕೂಡ ರಾತ್ರಿ ತನಕವೂ ತಮ್ಮ ಭೇಟಿಗೆ ಅವಕಾಶವನ್ನು ಕೊಟುತ್ತಿದ್ದ ಏಕೈಕ ನಾಯಕ ಆಸ್ಕರ್ ಫೆರ್ನಾಂಡಿಸ್ ನಾನು ಶಾಸಕ, ಮಂತ್ರಿಯಾಗಿದ್ದ ದಿನಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಹಾಗೂ ಎರಡೂ ಅವಿಭಜಿತ ದ.ಕ ಜಿಲ್ಲೆಯ ಅಭಿವೃದ್ದಿ ವಿಚಾರಗಳಿಗಾಗಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲು ಆಸ್ಕರ್ ಪ್ರತೀ ಬಾರಿಯೂ ನಮ್ಮೊಂದಿಗೆ ನಿಲ್ಲುತ್ತಿದ್ದರು ಎಂದರು.


Spread the love