ದೇಶದಲ್ಲಿ ಮೋದಿ ಅಚ್ಛೇ ದಿನ್ ತರುವ ಬದಲು ರೈತ ವಿರೋಧಿ ಆಡಳಿತ ನೀಡುತ್ತಿದ್ದಾರೆ – ಸುಧೀರ್ ಕುಮಾರ್ ಮರೋಳಿ

Spread the love

ದೇಶದಲ್ಲಿ ಮೋದಿ ಅಚ್ಛೇ ದಿನ್ ತರುವ ಬದಲು ರೈತ ವಿರೋಧಿ ಆಡಳಿತ ನೀಡುತ್ತಿದ್ದಾರೆ – ಸುಧೀರ್ ಕುಮಾರ್ ಮರೋಳಿ

ಹೆಬ್ರಿ : ದೇಶದಲ್ಲಿ ಅಚ್ಛೇ ದಿನ್ ತರುತ್ತೇವೆ ರೈತರ ಸೇವೆ ಮಾಡುವುದಾಗಿ ಭರವಸೆ ನೀಡಿ ಅಧಿಕಾರ ಹಿಡಿದವರು ಇಂದು ಜನರ ಹಾಗೂ ರೈತ ವಿರೋಧಿ ಆಡಳಿತ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.

ಅವರು ಮಂಗಳವಾರ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲ್ಲೂಕು ಕಛೇರಿಯ ಬಳಿ ಮಂಗಳವಾರ ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಇಂದು ದೇಶವು ಸಂಕಷ್ಟದ ಸ್ಥಿತಿಯಲ್ಲಿದೆ ಎಂದರೆ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ ಎಂಬುದು ಜನತೆಗೆ ಅರ್ಥವಾಗುತ್ತಿದೆ. ಮೋದಿ ದೇಶಕ್ಕೆ ಸಮರ್ಥ ನಾಯಕ ಅಲ್ಲ ಎಂಬುದು ಈಗ ಸಾಭೀತಾಗುತ್ತಿದೆ. ಬಿಜೆಪಿಯವರಿಗೂ ಮೋದಿ ಮತ್ತು ಬಿಜೆಪಿ ಸರ್ಕಾರ ಬೇಡವಾಗಿದೆ. ಮುಂದಿನ ಎಪ್ರಿಲ್ ನಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗೆ ತಲುಪಲಿದೆ, ಆದರೆ ಯಾರೂ ಮೋದಿಯನ್ನು ಪ್ರಶ್ನೆ ಮಾಡುವಂತಿಲ್ಲ, ಮೋದಿಯನ್ನು ಪ್ರಶ್ನಿಸಿದರೆ ಅವರಿಗೆ ಅಪಾಯವಿದೆ ಎಂದು ಹೇಳಿದರು.

ನಮ್ಮ ಸಂಸದೆ ಶೋಭಾ ಕರಂದ್ಲಾಜೆ ಅವರು ಜನರ ಕೆಲಸ ಮಾಡುತ್ತಿಲ್ಲ ಅವರಿಗೆ ಜನರ ಕಷ್ಟ ಏನು ಎನ್ನುವುದೇ ತಿಳಿದಿಲ್ಲ. ಹಿಂದೆ ಮನಮೋಹನ್ ಸಿಂಗ್ ಇರುವಾಗ ಗ್ಯಾಸ್ ಬೆಲೆ 40 ರೂಪಾಯಿ ಏರಿದಾಗ ರಸ್ತೆ ಮೇಲೆ ಅಡುಗೆ ಮಾಡಿ ಪ್ರತಿಭಟನೆ ಮಾಡಿದರು. ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಬಿಜೆಪಿ ಪಕ್ಷದವರೇ ಅತ್ಯಾಚಾರ ಮಾಡಿದರು. ಆದರೆ ಯಾರೂ ಮಾತನಾಡದಿರುವುದು ದುರಂತ . ಮುಂದೆ ರೈತರ ಭವಿಷ್ಯದ ದಿನ ಬಹಳ ಕರಾಳವಾಗಿದೆ. ಕಸ್ತೂರಿರಂಗನ್ ವರದಿಯಿಂದಾಗಿ ರೈತರಿಗೆ ಭಾರಿ ತೊಂದರೆ ಇದೆ ಎಂದು ಹೇಳಿದರು.

ಈಗ ದೇಶದಲ್ಲಿ ಯಾರಿಗೂ ಬಿಜೆಪಿ ಬೇಡವಾಗಿದೆ, ಬಡಜನತೆಗೆ ಬೇಕಾಗುವ ಯಾವೂದೇ ಯೋಜನೆಯನ್ನು ಬಿಜೆಪಿಯು ಮಾಡಿಲ್ಲ. 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಕಂಪೆನಿಗಳ ಸಹಿತ ಎಲ್ಲವನ್ನೂ ಬಿಜೆಪಿ ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ, ಆರ್ಟಿಒ ಇಲಾಖೆಯನ್ನು ಕೂಡ ಅಂಬಾನಿಗೆ ಮಾರಾಟ ಮಾಡಲಾಗುತ್ತಿದೆ. ಇದು ಜನಸಾಮಾನ್ಯರ ಮೇಲೆ ಸವಾರಿ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ ಬೆಲೆ ಏರಿಕೆಯ ಮೂಲಕ ಬಿಜೆಪಿ ಜನರ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ. ಕಾಂಗ್ರೆಸ್ ಜನರ ಪಕ್ಷ, ಕಾಂಗ್ರೆಸ್ ಜನರ ಬದುಕಿನ ಅಂಗ. ಈಗ ಎಲ್ಲವೂ ಎಲ್ಲರಿಗೂ ಅರ್ಥವಾಗಿದೆ. ಸುಳ್ಳು ಹೆಚ್ಚು ದಿನ ನಡೆಯುವುದಿಲ್ಲ ಎಂದರು.

ಯುವ ಕಾಂಗ್ರೆಸ್ ಗೆ ನೂತನ ವಾಗಿ ಆಯ್ಕೆಯಾದ ದೀಪಕ್ ಕೋಟ್ಯಾನ್, ಯೋಗೀಶ್ ಇನ್ನಾ, ರಕ್ಷಿತ್ ರಾಜ್ ಅಹಿತ ಹಲವರನ್ನು ಗೌರವಿಸಲಾಯಿತು.

ಬೆಲೆ ಏರಿಕೆಯನ್ನು ತಡೆಯುವಂತೆ ಹೆಬ್ರಿ ತಹಶೀಲ್ಧಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಅವರ ರೈತರ ಭದ್ರತೆ ದೇಶದ ಭದ್ರತೆ ಪುಸ್ತಕವನ್ನು ಅನಾವರಣಗೊಳಿಸಿ ರೈತರ ಪರ ಆಂದೋಲನಕ್ಕೆ ಚಾಲನೆ ನೀಡಲಾಯಿತು.


Spread the love