ದೇಶದಲ್ಲೇ ಅಗ್ರ ಸಾರಿಗೆ ಸಂಸ್ಥೆ ಕೆ.ಎಸ್.ಆರ್.ಟಿ.ಸಿ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಮ0ಗಳೂರು: ಕೆ.ಎಸ್.ಆರ್.ಟಿ.ಸಿ ಸಾರಿಗೆಯು ದೇಶದ ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕಾರ್ಯಾಚರಿಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಅವರು ಶನಿವಾರ ಸುಳ್ಯದಲ್ಲಿ ನೂತನ ಕೆ.ಎಸ್.ಆರ್.ಟಿ.ಸಿ ಡಿಪೋ ಉದ್ಘಾಟಿಸಿ ಮಾತನಾಡಿದರು. ಪಾರದರ್ಶಕತೆ ಆಡಳಿತ ಹಾಗೂ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಬಸ್‍ಗಳ ಓಡಾಟಕ್ಕೆ ಕೆ.ಎಸ್.ಆರ್.ಟಿ.ಸಿ ಆದ್ಯತೆ ನೀಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಯ ಜನಪರ ಸೇವೆಗಳಿಗಾಗಿ 100ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿದ್ದು, ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿಸಲು ಸರಕಾರ ಒತ್ತು ನೀಡುತ್ತಿದೆ ಎಂದು ಸಾರಿಗೆ ಸಚಿವರು ಹೇಳಿದರು.
ಪ್ರಸಕ್ತ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ನಾಲ್ಕು ವರ್ಷಗಳಲ್ಲಿ 76 ಬಸ್ ನಿಲ್ದಾಣ ಹಾಗೂ 40 ಬಸ್ ಡಿಪೋಗಳನ್ನು ಪ್ರಾರಂಭಿಸಲಾಗಿದೆ. 36 ನಗರಗಳಲ್ಲಿ ನಗರ ಸಾರಿಗೆ ಬಸ್ ಕಾರ್ಯಾಚರಣೆ ಆರಂಭವಾಗಿದೆ. ಕೆಎಸ್‍ಆರ್‍ಟಿಸಿ ನಗರ ಸಾರಿಗೆಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳಲ್ಲಿ ನಗರ ಸಾರಿಗೆ ಬಸ್ ಕಾರ್ಯಾಚರಣೆಗೆ ರಾಜ್ಯ ಸರಕಾರ ಆಸಕ್ತಿ ಹೊಂದಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಧರ್ಮಸ್ಥಳ, ಸುಳ್ಯ ಮತ್ತು ಮಡಿಕೇರಿಯಲ್ಲಿ ಒಟ್ಟು 6 ಕೋಟಿ ರೂ. ವೆಚ್ಚದಲ್ಲಿ ವಸತಿಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ ಸಚಿವರು 2014ರಲ್ಲಿ ಶಂಕುಸ್ಥಾಪನೆಗೊಂಡ ಸುಳ್ಯ ಡಿಪೋ ತ್ವರಿತಗತಿಯಲ್ಲಿ ಪೂರ್ಣಗೊಂಡಿದೆ. ಸುಳ್ಯದಲ್ಲಿ 11 ವಸತಿಗೃಹ ನಿರ್ಮಾಣವಾಗಲಿದೆ ಎಂದರು.
ಸಿಬ್ಬಂದಿ ವಸತಿಗೃಹಕ್ಕೆ ಶಿಲಾನ್ಯಾಸ ನೆರವೇರಿಸಿದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಉತ್ತಮ ಸಾರಿಗೆ ವ್ಯವಸ್ಥೆಯಿಂದಾಗಿ ಕೆ.ಎಸ್.ಆರ್.ಟಿ.ಸಿ ಸಂಸ್ತೆಯು ಇಂದು ಖಾಸಗೀ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಜಿಲ್ಲೆಯಲ್ಲಿ ಬೇಡಿಕೆ ಇರುವ ಮಾರ್ಗಗಳಲ್ಲಿ ಇನ್ನಷ್ಟು ಬಸ್‍ಗಳ ಓಡಾಟಕ್ಕೆ ಸಾರಿಗೆ ಸಂಸ್ಥೆಯು ಮುತುವರ್ಜಿ ವಹಿಸಬೇಕು ಎಂದರು.
ಕೆಎಸ್‍ಆರ್‍ಟಿಸಿ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕಡಬ ಹಾಗೂ ಕಾರ್ಕಳದಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ಸ್ಥಾಪನೆಗೆ ಬೇಡಿಕೆ ಇದ್ದು, ಈ ಬಗ್ಗೆ ಸಂಸ್ಥೆಯು ಪರಿಶೀಲಿಸುತ್ತಿದೆ. ಸುಬ್ರಮಣ್ಯದಲ್ಲಿ ಡಿಪೋ ಸ್ಥಾಪನೆಗೆ ಜಾಗದ ಸಮಸ್ಯೆ ಇದ್ದು, ಸೂಕ್ತ ಜಾಗ ದೊರೆತಲ್ಲಿ ಡಿಪೋ ಸ್ಥಾಪಿಸಲಾಗುವುದು ಎಂದರು. ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡುವ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ ಎಂದು ಹೇಳಿದರು.
ಸುಳ್ಯ ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಕೆಎಸ್‍ಆರ್‍ಟಿಸಿ ನಿರ್ದೇಶಕರಾದ ಟಿ.ಕೆ. ಸುಧೀರ್, ರಮೇಶ್ ಶೆಟ್ಟಿ, ಶೌಕತ್ ಆಲಿ ಮತ್ತಿತರರು ಉಪಸ್ಥಿತರಿದ್ದರು.