
ದೇಶದ ಉತ್ತಮ ನಾಗರಿಕರಾಗಲು ಮೌಲ್ಯಾಧಾರಿತ ಶಿಕ್ಷಣ ಸಹಕಾರಿ – ಬಿಷಪ್ ಜೆರಾಲ್ಡ್ ಲೋಬೊ
ಕಾರ್ಕಳ: ದೇಶದ ಉತ್ತಮ ನಾಗರಿಕರಾಗಲು ನೀಡುವ ಸಂಸ್ಕಾರವೇ ಮೌಲ್ಯಾಧಾರಿತ ಶಿಕ್ಷಣವಾಗಿದೆ ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಗುರುವಾರ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶವಾದ ಕಣಜಾರಿನಲ್ಲಿ ಉಡುಪಿ ಧರ್ಮಪ್ರಾಂತ್ಯದ ಅಧೀನದಲ್ಲಿರುವ ಲೂರ್ಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಐಸಿಎಸ್ಇ ಮಾನ್ಯತೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಕೇವಲ ಓದು ಬರಹ ಜ್ಞಾನ ಸಂಪಾದನೆ ಅಲ್ಲ ಬದಲಾಗಿ ಮಾನವತೆಯ ವಿಕಾಸವಾಗಿದೆ. ಮನಸ್ಸು ದೇಹ ಹೃದಯ ಆತ್ಮದ ಬೆಳವಣಿಗೆ ನಿಜವಾದ ಶಿಕ್ಷಣವಾಗಿದೆ. ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಶಿಕ್ಷಣ ಮುಖ್ಯ ದಾರಿಯಾಗಿದ್ದು, ಇದರ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಒಂದು ದೇಶದ ಅಭಿವೃದ್ಧಿಯನ್ನು ಅಳೆಯುದು ದೊಡ್ಡ ಕಟ್ಟಡಗಳಿಂದಲ್ಲ ಬದಲಾಗಿ ಪ್ರತಿಯೊಬ್ಬ ಪ್ರಜೆಯು ಸುಶಿಕ್ಷಿತರಾದಾಗ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮಾನವನ ಸಮಗ್ರ ಅಭಿವೃದ್ಧಿಗೆ ಮೌಲ್ಯಾಧಾರಿತ ಶಿಕ್ಷಣ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯವಿದೆ. ಶಿಕ್ಷಣದ ಮೂಲಕ ಪ್ರತಿಭೆಗಳು ಪ್ರಕಾಶಿಸಿದಾಗ ಅದು ನಿಜವಾದ ಶಿಕ್ಷಣವಾಗುತ್ತದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಲಿಟ್ಲರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ಇದರ ನಿರ್ದೇಶಕರಾದ ಪ್ರೋ. ಮಾಥ್ಯು ಸಿ ನೈನಾನ್ ಅವರು ಸೂಕ್ತ ಉದ್ದೇಶ ಮತ್ತು ಗುರಿಯೊಂದಿಗೆ ಆರಂಭಿಸಲಾದ ಶಿಕ್ಷಣ ಸಂಸ್ಥೆ ಯಶಸ್ವಿಯಾಗಲು ಸಾಧ್ಯವಿದೆ. ಉತ್ತಮ ಶಿಕ್ಷಕರು ಶಾಲೆಯ ಗುಣಮಟ್ಟವನ್ನು ಹೆಚ್ಚಿಸುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಮಾಹಿತಿ ಹಾಗೂ ಗುಣಮಟ್ಟದ ಶಿಕ್ಷಣ ಇದ್ದಲ್ಲಿ ಅವರುಗಳ ಭವಿಷ್ಯ ಉತ್ತಮವಾಗಲು ಸಾಧ್ಯವಿದೆ. ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಐಸಿಎಸ್ ಇ ಶಿಕ್ಷಣ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ವಂ|ವಿನ್ಸೆಂಟ್ ರೋಬರ್ಟ್ ಕ್ರಾಸ್ತಾ ಮಾತನಾಡಿ ವಿದ್ಯಾರ್ಥಿಗಳನ್ನು ಕೇವಲ ಪಠ್ಯಪುಸ್ತಕ್ಕೆ ಸೀಮಿತವಾಗಿರಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದು ಹೆಚ್ಚು ಬುದ್ದಿವಂತರಾಗಿಸಲು ಸಾಧ್ಯವಿದೆ ಎಂದರು.
ಶಾಲೆ ಬೆಳೆದು ಬಂದ ದಾರಿಯ ಸವಿಸ್ತಾರ ವರದಿಯನ್ನು ಶಾಲಾ ಪ್ರಾಂಶುಪಾಲರಾದ ಜಾಸ್ಮಿನ್ ಪಿಂಟೊ ಮಂಡಿಸಿದರು.
ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಿಗೆ, ಸ್ಥಾಪಕ, ಪ್ರಸ್ತುತ ಸಂಚಾಲಕರು, ಪ್ರಾಂಶುಪಾಲರನ್ನು, ಧರ್ಮಾಧ್ಯಕ್ಷರಾದ ವಂ|ಡಾ|ಜೆರಾಲ್ಡ್ ಲೋಬೊ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸ್ಥಾಪಕ ಸಂಚಾಲಕರಾದ ವಂ ಅಲೆಕ್ಸಾಂಡರ್ ಲೂವಿಸ್, ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಲಿನಿ, ಕಣಜಾರು ಲೂರ್ಡ್ಸ್ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸ್ಟ್ಯಾನಿ ಸಲ್ಡಾನಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸಂದೀಪ್ ಕ್ಯಾಸ್ತಲಿನೊ, ಶಾಲಾ ವಿದ್ಯಾರ್ಥಿ ಮುಖಂಡರಾದ ಅಂಕಿತ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕರಾದ ವಂ. ವಿಶಾಲ್ ಲೋಬೊ ಸ್ವಾಗತಿಸಿ, ಶಿಕ್ಷಕಿ ಕವಿತಾ ವಂದಿಸಿ, ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.