ದೇಶದ ಏಕತೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಬಿ.ಕೆ.ಹರಿಪ್ರಸಾದ್

Spread the love

ದೇಶದ ಏಕತೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಬಿ.ಕೆ.ಹರಿಪ್ರಸಾದ್

ಚಾಮರಾಜನಗರ: ಭಾರತದ ಪರಿಕಲ್ಪನೆ ಕೊಟ್ಟಿರುವುದು ಮಹಾತ್ಮ ಗಾಂಧೀಜಿ‌ಯಾಗಿದ್ದು, ದೇಶದ ಏಕತೆ, ಸಮಗ್ರತೆ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾಷೆ, ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿ ದೇಶವನ್ನು ಕಲುಷಿತಗೊಳಿಸಿದ್ದೇ ಬಿಜೆಪಿ. ನಾವು ಬಿಜೆಪಿ ಅವರಂತೆ ಯಾತ್ರೆ ಮಾಡಿ ದಂಗೆ, ಕೊಲೆ, ಸುಲಿಗೆ ಮಾಡಿಲ್ಲ. ಬಿಜೆಪಿ ಯಾವಾಗ ಯಾತ್ರೆ ಮಾಡಿದರೂ ಕೋಮುಗಲಭೆ ಆಗಿದೆ. ನಮ್ಮದು ಭಾರತ್ ಜೋಡೋ ಯಾತ್ರೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡಲಿದೆ. ಭಾರತ ಕವಲುದಾರಿಯಲ್ಲಿದ್ದು, ಅಸಲಿ ದೇಶಭಕ್ತರು ಒಂದು ಕಡೆ.. ನಕಲಿ ದೇಶ ಭಕ್ತರಾದ ಸಂಘಿಗಳು ಮತ್ತೊಂದು ಕಡೆ ಎಂದು ಲೇವಡಿ ಮಾಡಿದ್ದಾರೆ.

ಮಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ ಇಬ್ಬರೂ ಒಂದೇ. ಅವರಿಂದಲೇ ದೇಶ ಈ ಸ್ಥಿತಿಗೆ ಬಂದದ್ದು ಎಂದು ಗಂಭೀರ ಆರೋಪ ಮಾಡಿದ ಅವರು, ಸಾವರ್ಕರ್ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇರಿಸುವ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿ ಒಬ್ಬ ನಾಸ್ತಿಕರನ್ನು ತೆಗೆದುಕೊಂಡು ಹೋಗಿ ನಂಬಿಕಸ್ಥರ ಜಾಗದಲ್ಲಿ ಇಡುವುದು ಹಾಸ್ಯಾಸ್ಪದ. ಅವರ ಆತ್ಮಕತೆ, ಚರಿತ್ರೆ ಓದದೇ ರಾಜಕೀಯ ಹಿತಾಸಕ್ತಿಗಾಗಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಬಂದು 8 ವರ್ಷಗಳು ಆಗಿವೆ. ರಾಜ್ಯದಲ್ಲಿ ಬಿಜೆಪಿ ಬಂದು 3 ವರ್ಷ ಆಗಿದೆ‌. ಆದರೆ, ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಹಿಳೆಯರಿಗೆ ರಕ್ಷಣೆ ಕೊಡಲಾಗುತ್ತಿಲ್ಲ. ರೈತರಿಗೆ ಬೆಂಬಲ ಬೆಲೆ ಕೊಡುತ್ತಿಲ್ಲ. ಪ್ರವಾಹ ಹಾನಿಗೆ ಪರಿಹಾರ ಕೊಡುತ್ತಿಲ್ಲ. ಬೆಲೆ ಏರಿಕೆ, ಶೇ 50ರಷ್ಟು ಕಮಿಷನ್ ಇಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ವಿಚಾರವನ್ನು ಮರೆಮಾಚಲು ಇತಿಹಾಸ ತಿದ್ದಿ ಗೊಂದಲ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಬೇರೆ ಬೇರೆ ವಿಚಾರ ಎಳೆದು ತರುತ್ತಿದ್ದಾರೆ ಎಂದು ಸಾವರ್ಕರ್ ರಥಯಾತ್ರೆಗೆ ಬಗ್ಗೆ ಕಿಡಿಕಾರಿದ್ದಾರೆ.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.‌ಮರಿಸ್ವಾಮಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಹೆಚ್ ಎಂ ಗಣೇಶ್ ಪ್ರಸಾದ್ ಇದ್ದರು.


Spread the love