ದೇಶಪ್ರೇಮದ ಪಾಠ ಮಾಡುವವರು ದೇಶದ ಸೊತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ: ಎಚ್ ನರಸಿಂಹ ಕುಟುಕು

Spread the love

ದೇಶಪ್ರೇಮದ ಪಾಠ ಮಾಡುವವರು ದೇಶದ ಸೊತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ: ಎಚ್ ನರಸಿಂಹ ಕುಟುಕು

ಕುಂದಾಪುರ: ಮಾತು ಮಾತಿಗೂ ದೇಶಪ್ರೇಮದ ಪಾಠ ಮಾಡುವ ಬಿಜೆಪಿ ಸರ್ಕಾರ ಈ ದೇಶದ ಜನಸಾಮಾನ್ಯರ ತೆರಿಗೆಯಿಂದ ಕಟ್ಟಿ ಬೆಳೆಸಿದ ಅಪಾರವಾದ ಸಂಪನ್ಮೂಲ ಹೊಂದಿರುವ ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಮಾರಾಟ ಮಾಡುತ್ತಿರುವುದು ವಿಪರ್ಯಾಸವೇ ಸರಿ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಎಚ್ ನರಸಿಂಹ ಕುಟುಕಿದರು.

ಅವರು ಭಾನುವಾರ ಸಿಐಟಿಯು ಕುಂದಾಪುರ ವತಿಯಿಂದ‌ ಶಾಸ್ತ್ರೀವೃತ್ತದಲ್ಲಿ ನಡೆದ ಮೇ ದಿನಾಚರಣೆಯ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕರಾವಳಿ ಭಾಗದಲ್ಲಿ‌ ಸಹಸ್ರಾರು ಕುಟುಂಬಗಳಿಗೆ ಆಸರೆಯಾಗಿದ್ದ ಹೆಂಚು ಉದ್ಯಮಗಳು ಇಂದು ಅಳಿವಿನ‌ ಅಂಚಿನಲ್ಲಿದೆ. ಇಂತಹ ಕೈಗಾರಿಕೆಗೆ ಬೇಕಾದಂತಹ ಅನುಕೂಲತೆಗಳನ್ನು ಮಾಡಿಕೊಟ್ಟು ಅವುಗಳನ್ನು ಉಳಿಸಿಕೊಳ್ಳುವ ಕನಿಷ್ಠ ಕಾಳಜಿ ಇಲ್ಲದ ಸರ್ಕಾರಕ್ಕೆ ನಾಚಿಕೆಯಾಗಬೇಕು. ಆವೆಮಣ್ಣಿನ ಸಮಸ್ಯೆ, ಡೀಸೇಲ್ ಬೆಲೆ ಏರಿಕೆ ನಡುವೆ ಸಬ್ಸಿಡಿ ರೂಪದಲ್ಲಿ‌ ಡೀಸೇಲ್ ಹಾಗೂ‌ ಕಟ್ಟಿಗೆಯನ್ನು ಒದಗಿಸಿಕೊಟ್ಟು ಸಹಸ್ರಾರು ಕುಟುಂಬಗಳಿಗೆ ಅನ್ನ ಕೊಡುವ ಕೈಗಾರಿಕೆಯನ್ನು ಉಳಿಸಿಕೊಳ್ಳುವ ಗೋಜಿಗೂ ಈ ಕಾರ್ಮಿಕ ವಿರೋಧಿ ಸರ್ಕಾರ ಹೋಗದಿರುವುದು ದುರಂತ. ಕೇಂದ್ರ, ಬಿಜೆಪಿ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳಿಂದ ಕಾರ್ಮಿಕ ಕುಟುಂಬಗಳು ಇಂದು ಬೀದಿಗೆ ಬಂದು ಬಿದ್ದಿವೆ. ಶೇಕಡಾ 12 ರಷ್ಟು ಜಿಎಸ್ಟಿಯನ್ನು ಅಳಿವಿನ‌ ಅಂಚಿನಲ್ಲಿರುವ ಹೆಂಚು ಉದ್ಯಮಕ್ಕೆ ಹಾಗೂ ಬಟ್ಟೆ ವ್ಯಾಪಾರಸ್ಥರ ಮೇಲೆ ವಿಧಿಸಿ ಎಲ್ಲಾ ದುಡಿಯುವ ವರ್ಗಗಳಿಗಿರುವ ಅವಕಾಶಗಳ ಬಾಗಿಲು ಮುಚ್ಚುವ ರೀತಿಯಲ್ಲಿ ಈ‌ ಸರ್ಕಾರದ ನಡೆ ಹೋಗುತ್ತಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಸರ್ಕಾರದ ಕಾರ್ಮಿಕ ವಿರೋಧಿ ತಪ್ಪು ನೀತಿಗಳ ವಿರುದ್ದ‌ ಜನರು ಪ್ರತಿಭಟಿಸಬಾರದು, ಮಾತನಾಡಬಾರದು ಎಂದು ಜನರ, ವಿದ್ಯಾರ್ಥಿಗಳ, ಯುವಜನರನ್ನು ಹಾದಿ ತಪ್ಪಿಸುವ ರೀತಿಯಲ್ಲಿ ವಸ್ತೃ, ಮಾಂಸ, ವ್ಯಾಪಾರದ ವಿಚಾರದಲ್ಲಿ ಯೆಥೇಚ್ಛವಾಗಿ ಧಾರ್ಮಿಕತೆಯ ಹೆಸರಿನಲ್ಲಿ ಜನರನ್ನು‌ ಮರಳುಗೊಳಿಸಿ ಧರ್ಮದ ಅಮಲಿನಲ್ಲಿ‌ ಜನರನ್ನು ತೇಲಾಡಿಸಿ ಮತ್ತೆ ಪುನಃ ಮುಂದಿನ‌ ಬಾರಿ ಅಧಿಕಾರಕ್ಕೆ ಬರುವ ಕೋಮುವಾದಿ ಪಕ್ಷದ ಹವಣಿಕೆಯ ವಿರುದ್ದ‌ ಕಾರ್ಮಿಕ ವರ್ಗ ಸೆಟೆದು ನಿಲ್ಲಬೇಕು ಎಂದು ಎಚ್ ನರಸಿಂಹ ಕರೆ ನೀಡಿದರು.

ಬಂಡವಾಳಸಾಹಿ ಸರ್ಕಾರಗಳು ಕಾರ್ಮಿಕರನ್ನು ಇನ್ನೊಂದು ರೀತಿಯಲ್ಲಿ ದುಡಿಸಿಕೊಳ್ಳುತ್ತಿವೆ. ಇಂದು ಕೇಂದ್ರ ಸರ್ಕಾರದ ದಿವಾಳಿಕೋರ ನವ ಉದಾರವಾದಿ ಆರ್ಥಿಕ ನೀತಿಗಳ ವಿರುದ್ದ ಕಾರ್ಮಿಕ ವರ್ಗ ನಿರಂತರವಾದ ಹೋರಾಟಗಳನ್ನು ನಡೆಸುತ್ತಿದೆ ಎಂದು ಸಿಐಟಿಯು ರಾಜ್ಯ ಸದಸ್ಯ ಸುರೇಶ್‌ ಕಲ್ಲಾಗರ ಹೇಳಿದರು.

ಬೀಡಿ ಸಂಘಟನೆಯ ಮುಖಂಡ ಮಹಾಬಲ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಜ್ಯ ಸಮಿತಿ ಸದಸ್ಯ ಸುರೇಶ ಕಲ್ಲಾಗರ ಮಾತನಾಡಿದರು. ಸಿಡಬ್ಲ್ಯೂಎಫ್ಐ ನ ಯು ದಾಸ ಭಂಡಾರಿ, ಪುರಸಭೆಯ ಮಾಜಿ ಆಧ್ಯಕ್ಷ ವಿ. ನರಸಿಂಹ, ಬೀಡಿ ಯೂನಿಯನ್ ನ ಮುಖಂಡರಾದ ಬಲ್ಕೀಸ್, ಅಂಗನವಾಡಿ ಸಂಘಟನೆಯ ಭಾಗ್ಯ ಎಸ್, ಲಕ್ಷ್ಮಣ ಬರೆಕಟ್ಟು, ಚಂದ್ರಶೇಖರ್, ಸಂತೋಷ ಹೆಮ್ಮಾಡಿ, ರಾಜು ದೇವಾಡಿಗ ಮೊದಲಾದವರು ಇದ್ದರು.

ಬಹಿರಂಗಸಭೆಗೂ ಮುನ್ನ ನಗರದ ಪ್ರಮುಖ ರಸ್ತೆಯಲ್ಲಿ ವಿವಿಧ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಕೆಂಬಾವುಟ ಹಿಡಿದು ಕಾಲ್ನಡಿಗೆ ಜಾಥ ನಡೆಸಿದರು.‌ ಜೊತೆಗೆ ಸಿಐಟಿಯು ಸಂಘಟನೆಯ ಆಟೋ‌ಚಾಲಕರು ಆಟೋ‌ರಿಕ್ಷಾ ಮೂಲಕ ಬೃಹತ್ ರ್ಯಾಲಿ ನಡೆಸಿದರು.


Spread the love