ದೇಶವನ್ನು ಮನೆ ಎಂದು ಭಾವಿಸಿದರೆ ಭ್ರಷ್ಟಾಚಾರ ನಡೆಯಲ್ಲ: ಡಾ.ಪಿ.ಎಸ್.ಹರ್ಷ

Spread the love

ದೇಶವನ್ನು ಮನೆ ಎಂದು ಭಾವಿಸಿದರೆ ಭ್ರಷ್ಟಾಚಾರ ನಡೆಯಲ್ಲ: ಡಾ.ಪಿ.ಎಸ್.ಹರ್ಷ

ಬೆಂಗಳೂರು: ಯಾವುದೇ ವ್ಯಕ್ತಿ ತನ್ನ ಮನೆಯವರಿಗಾಗಿ ಮತ್ತು ಅವರ ಮುಂದೆ ಎಷ್ಟು ಪ್ರಾಮಾಣಿಕನಾಗಿರುತ್ತಾನೆಯೋ ಅಷ್ಟೇ ಪ್ರಾಮಾಣಿಕತೆಯನ್ನು ದೇಶಕ್ಕೆ ಸಹ ಅನ್ವಯಿಸಿಕೊಂಡು ಇದು ನನ್ನ ಮನೆ ಎಂದು ಭಾವಿಸಿದ್ದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಅಭಿಪ್ರಾಯಪಟ್ಟರು.

ಸೋಮವಾರ ನಿಮ್ಹಾನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ “ಭ್ರಷ್ಟಾಚಾರ ಮುಕ್ತ – ವಿಕಸಿತ ಭಾರತ” ಒಂದು ವಾರದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ ಇಂದು ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ, ಪ್ರಸ್ತುತ 3 ಟ್ರಿಲಿಯನ್ ದೇಶವಾಗಿದ್ದು, ಸನ್ಮಾನ್ಯ ಪ್ರಧಾನಮಂತ್ರಿಗಳ ಗುರಿಯಂತೆ ಶೀಘ್ರದಲ್ಲಿ 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆಯ ದೇಶವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಭ್ರಷ್ಟಚಾರ ಎನ್ನುವುದು ವ್ಯಕ್ತಿಗತವಾಗಿದ್ದು, ಅದೊಂದು ಮಾನಸಿಕ ಭ್ರಷ್ಟತೆಯಾಗಿದೆ, ಅಧಿಕಾರದಲ್ಲಿರುವ ಪ್ರತಿಯೊಬ್ಬರು ನಾನು ನನ್ನ ದೇಶಕ್ಕಾಗಿ ದುಡಿಯುತ್ತಿದ್ದೇನೆ ಎಂದು ಭಾವಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಜಗತ್ತು ಇಂದು ಭಾರತದ ಸಧೃಡ ಆರ್ಥಿಕತೆಯ ಬೆಳವಣಿಗೆಯನ್ನು ಬೆರಗು ಕಣ್ಣಿನಿಂದ ನೋಡುತ್ತಿದೆ.

ಬೆಂಗಳೂರು ಇಂದು ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಿದೆ. ಜಗತ್ತು ನಮ್ಮ ಮೇಲೆ ನಂಬಿಕೆ ಇಟ್ಟು ಇಂದು ನಮ್ಮ ರಾಜ್ಯದ ಮೇಲೆ ಹೂಡಿಕೆ ಮಾಡುತ್ತಿದೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ಸರ್ಕಾರ ಆಡಳಿತಾತ್ಮಕವಾಗಿ ಅಡೆತಡೆಗಳಿಲ್ಲದ ಜನಸ್ನೇಹಿ ಕಾನೂನುಗಳನ್ನು ಜಾರಿಗೆ ತರುತ್ತಿದೆ. 1.3 ಬಿಲಿಯನ್ ಆಧಾರ್ ಡಾಟಾ ಹೊಂದಿರುವ ನಮ್ಮ ರಾಷ್ಟ್ರ ಅತ್ಯಂತ ಉತ್ತಮ ಮಾನವ ಸಂಪನ್ಮೂಲ ಹೊಂದಿದೆ. ಈಗಾಗಲೇ ಸರ್ಕಾರದ ಅನೇಕ ಯೋಜನೆಗಳು ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ನೇರ ನಗದು ಬರ್ಗಾವಣೆ ಜಾರಿಗೆ ತಂದು ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ನಾಂದಿ ಹಾಡಿದೆ. ಭವಿಷ್ಯದಲ್ಲಿ ಇಂತಹ ಅನೇಕ ಸೃಜನಾತ್ಮಕ ಬದಲಾವಣೆಗಳು ಆಡಳಿತದಲ್ಲಿ ಜಾರಿಗೆ ಬರಲಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಿಮ್ಹಾನ್ಸ್ ನಿರ್ದೇಶಕರಾದ ಡಾ. ಪ್ರತಿಮಾಮೂರ್ತಿ ಅವರು ಮಾತನಾಡಿ ಪ್ರಾಮಾಣಿಕತೆ, ಸೌಹಾರ್ದತೆ ಮತ್ತು ಪಾರದರ್ಶಕತೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಭ್ರಷ್ಟಾಚಾರವನ್ನು ಬೇರಿನಿಂದ ಕಿತ್ತೊಗೆಯಬಹುದು. ಉತ್ತಮ ಸಂಸಾರ ಅಥವಾ ದೇಶವನ್ನು ಕಟ್ಟಬೇಕಾದಲ್ಲಿ ಪ್ರತಿಯೊಬ್ಬರು ಈ ಮೂರು ಮಂತ್ರಗಳನ್ನು ಪಾಲಿಸಬೇಕು. ವ್ಯಕ್ತಿಯಾಗಲಿ ಅಥವಾ ಸಂಸ್ಥೆಯಾಗಲಿ ನೈತಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಅತೀ ಶೀಘ್ರದಲ್ಲಿ ನಿಮ್ಹಾನ್ಸ್ ಸಂಸ್ಥೆ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಸಂಸ್ಥೆಗಾಗಿ ಅವಿರತವಾಗಿ ದುಡಿದು ಇಂದು ಈ ಮಟ್ಟಕ್ಕೆ ಬೆಳೆಸಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೈತಿಕತೆ ಪ್ರತಿದಿನದ ಆಚರಣೆಯಾಗಲಿ ಎಂದು ಅಧಿಕಾರಿಗಳಿಗೆ ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಡಾ. ಚಿತ್ತರಂಜನ್, ಮರಳೀಧರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here