ದೇಶ ವಿದೇಶಗಳ ಭಕ್ತರನ್ನು ಆಕರ್ಷಿಸುವ ತಾಣ ಉಚ್ಚಿಲ ಕ್ಷೇತ್ರ – ಶೋಭಾ ಕರಂದ್ಲಾಜೆ

Spread the love

ದೇಶ ವಿದೇಶಗಳ ಭಕ್ತರನ್ನು ಆಕರ್ಷಿಸುವ ತಾಣ ಉಚ್ಚಿಲ ಕ್ಷೇತ್ರ – ಶೋಭಾ ಕರಂದ್ಲಾಜೆ

ಉಡುಪಿ: ಹೆದ್ದಾರಿ ಪಕ್ಕದಲ್ಲಿದ್ದುಕೊಂಡು ಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರವು ದೇಶ ವಿದೇಶಗಳ ಭಕ್ತರನ್ನು ಆಕರ್ಷಿಸುವ ತಾಣವಾಗಿ ಮೂಡಿ ಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ಆಶ್ರಯದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಸಹಯೋಗದೊಂದಿಗೆ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ದಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯ ಉದ್ಘಾಟನೆ ಮತ್ತು ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿರ್ದೇಕರಾಗಿ ಆಯ್ಕೆಯಾದ ದೇವಿಪ್ರಸಾದ್ ಶೆಟ್ಟಿ ಮತ್ತು ಝೀ ಕನ್ನಡ ಡ್ರಾಮಾ ಜೂನಿಯರ್ ವಿಭಾಗದ 4 ನೇ ಆವೃತ್ತಿಯಲ್ಲಿ ವಿಜೇತರಾದ ಸಮೃದ್ಧಿ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಶ್ರೀ ಮಹಾಲಕ್ಷ್ಮೀ ದೇವಳದ ಗೌರವ ಸಲಹೆಗಾರರಾದ ನಾಡೋಜ ಡಾ ಜಿ ಶಂಕರ್ ಮಾತನಾಡಿ ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ದಸರಾ ಉತ್ಸವ ಕಾಣಬಹುದಾಗಿದೆ ಎಂದರು.

ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ ಸಮಾಜದ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿರುವ ಬ್ಯಾಂಕ್ ಕರಾವಳಿಯ ಅಗ್ರಮಾನ್ಯ ಬ್ಯಾಂಕ್ ಆಗಿ ಮೂಡಿಬಂದಿದ್ದು ಮುಂದೆ ಪ್ರತಿವರ್ಷ ಚಿತ್ರಕಲಾ ಸ್ಪರ್ಧೆ ಆಯೋಜಿಲಾಗುವುದು. ಈ ಬಾರಿ ನವೆಂಬರ್ ನಲ್ಲಿ ಉಡುಪಿಯಲ್ಲಿ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಆಯೋಜಿಸಲಾಗಿದ್ದು ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಂ ಎನ್ ರಾಜೇಂದ್ರ ಕುಮಾರ್ ಇಂದಿನ ಸನ್ಮಾನ ಸಹಕಾರಿ ಕ್ಷೇತ್ರಕ್ಕೆ ಸಂದ ಗೌರವಾಗಿದೆ. ಅವಿಭಜಿತ ದಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಉಚ್ಚಿಲ ದಸರಾದ ಮೂಲಕ ನಡೆದಿದೆ ಎಂದರು.

ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳೀ, ದಕ ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಎಸ್ ಸಾಲ್ಯಾನ್ ಉಪಸ್ಥಿತರಿದ್ದರು.


Spread the love