ದೊಡ್ಡವರ ಹೇಳಿಕೆಗೆ ನಾನು ಉತ್ತರ ಕೊಡಲು ಹೋಗುವುದಿಲ್ಲ: ಪರಂ ಹೇಳಿಕೆಗೆ ತಿಮರೋಡಿ ಪ್ರತಿಕ್ರಿಯೆ

Spread the love

ದೊಡ್ಡವರ ಹೇಳಿಕೆಗೆ ನಾನು ಉತ್ತರ ಕೊಡಲು ಹೋಗುವುದಿಲ್ಲ: ಪರಂ ಹೇಳಿಕೆಗೆ ತಿಮರೋಡಿ ಪ್ರತಿಕ್ರಿಯೆ

ಕುಂದಾಪುರ: ದೊಡ್ಡ ಮಟ್ಟದಲ್ಲಿ ಈಗಿನ ರಾಜ್ಯ ಸರ್ಕಾರ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡುತ್ತದೆ ಎನ್ನುವ ವಿಶ್ವಾಸವಿದೆ. ರಾಜ್ಯ ಗೃಹ ಸಚಿವರು ಯಾವ ದಾರಿಯಲ್ಲಿ ಆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ದೊಡ್ಡವರ ಹೇಳಿಕೆಗೆ ನಾನು ಉತ್ತರ ಕೊಡಲು ಹೋಗುವುದಿಲ್ಲ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

ಶುಕ್ರವಾರ ಸೌಜನ್ಯ ಪರ ನ್ಯಾಯಕ್ಕಾಗಿ ಆಗ್ರಹಿಸಿ ಕುಂದಾಪುರದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಭಾಗವಹಿಸಿದ ಬಳಿಕ ಗೃಹ ಸಚಿವ‌ ಜಿ. ಪರಮೇಶ್ವರಾವರ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸೌಜನ್ಯ ಕಟುಂಬಕ್ಕೆ ನ್ಯಾಯ ಕೊಡಿಸಿಯೇ ತೀರುತ್ತೇವೆ. ನ್ಯಾಯ ಕೊಡಿಸಿ ಎಂದು ನಾವು ಸರ್ಕಾರಕ್ಕೆ ಅಂಗಲಾಚುವುದಿಲ್ಲ. ಈ ಪ್ರಕರಣ ಹಳ್ಳ ಹಿಡಿದದ್ದೇ ಸರ್ಕಾರದಿಂದ. ಆಗ ಬಿಜೆಪಿ ಸರ್ಕಾರವಿತ್ತು. ಈಗ ಕಾಂಗ್ರೆಸ್ ಆಡಳಿತದಲ್ಲಿದೆ. ಅವರು ಹಾಳು ಮಾಡಿರುವುದನ್ನೇ ನೀವು ಮಾಡಬೇಡಿ ಎಂದು ಹೇಳುತ್ತೇವೆ. ನೈಜ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಅಧಿಕಾರಿಗಳಿಂದ ಲೋಪವಾಗಿದ್ದಲ್ಲ. ಅಧಿಕಾರಿಗಳ ಕೈಯ್ಯಲ್ಲಿ ಪ್ರಕರಣ ಹಳ್ಳ ಹಿಡಿಯುವಂತೆ ಮಾಡಿಸಿದ್ದು ಎಂದು ತಿಮರೋಡಿ ಹೇಳಿದರು.

ಈ ಪ್ರಕರಣದ ಮೊದಲ ತನಿಖಾಧಿಕಾರಿ ಯೋಗೀಶ್ ನನ್ನ ಬಳಿಯೇ ಹೇಳಿದ್ದಾರೆ. ಐದು ಮಂದಿ ಆರೋಪಿಗಳಿದ್ದಾರೆ ಎಂದು. ತೀರ್ಪು ಬರುವ ಮೂರು ತಿಂಗಳು ಮೊದಲು ನನಗೆ ಯೋಗೀಶ್ ಕರೆ ಮಾಡಿದ್ದರು. ಆ ಸಂದರ್ಭದಲ್ಲಿ ಕೋರ್ಟಿನ ಮುಂದೆ ಹೋಗಿ ಸತ್ಯ ಹೇಳಿ ಇಲ್ಲದಿದ್ದರೆ ಮಂಜುನಾಥ, ಅಣ್ಣಪ್ಪ ಸ್ವಾಮಿಯ ಶಾಪ ತಟ್ಟುತ್ತದೆ ಎಂದು ಹೇಳಿದ್ದೆ. ಬೇಕಾದರೆ ಅವರೊಂದಿಗೆ ಮಾತನಾಡಿದ ಕಾಲ್ ಡಿಟೇಲ್ಸ್ ತೆಗೆಯಬಹುದು ಎಂದರು.

ಕರಾವಳಿ, ರಾಜ್ಯ ಮಾತ್ರವಲ್ಲದೇ ಶನಿವಾರ ಮುಂಬೈಯಲ್ಲೂ ಪ್ರತಿಭಟನೆ ನಡೆಯುತ್ತದೆ. ಜನಶಕ್ತಿಯ ಹೋರಾಟದ ಜೊತೆಗೆ ಕಾನೂನಿನ ಹೋರಾಟವನ್ನೂ ಮಾಡುತ್ತೇವೆ. ಧರ್ಮಸ್ಥಳದಲ್ಲಿ ಧರ್ಮದ, ನ್ಯಾಯಪೀಠದ ವ್ಯವಸ್ಥೆ ಇದೆ. ಯಾರನ್ನೋ ಬಚಾವ್ ಮಾಡಲು ಹೊರಟರೆ ನಿಜವಾಗಿಯೂ ಸರ್ವನಾಶವಾಗಿ ಹೋಗುತ್ತಾರೆ. ಈ ಪ್ರಕರಣದಲ್ಲಿ ಯಾವ ರಾಜಕೀಯ ಮಾಡಲು ದೇವರು ಬಿಡುವುದಿಲ್ಲ. ಎಷ್ಟೋ ಅತ್ಯಾಚಾರದ ಸಾಕ್ಷಿಗಳನ್ನು ಕೊಲೆ ಮಾಡಿ ಮುಗಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಡಿಯೋ ಬಿಡುಗಡೆ ಮಾಡುತ್ತೇವೆ. ಈ ಪಾಪಿಗಳು ಯಾರೆಂದು ಆಮೇಲೆ ತಿಳಿಯುತ್ತದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

ಈ ಸಂದರ್ಭ ಸೌಜನ್ಯ ತಾಯಿ ಕುಸುಮಾವತಿ, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಸುಧೀರ್ ಮಲ್ಯಾಡಿ ಇದ್ದರು.


Spread the love