ದೋಣಿ ದುರಂತ ಸಂತಾಪ ಸಭೆ, ಗರಿಷ್ಠ ಪರಿಹಾರಕ್ಕೆ ಒತ್ತಾಯ

Spread the love

ದೋಣಿ ದುರಂತ ಸಂತಾಪ ಸಭೆ, ಗರಿಷ್ಠ ಪರಿಹಾರಕ್ಕೆ ಒತ್ತಾಯ

ಮಂಗಳೂರು: ಮೀನುಗಾರಿಕಾ ದೋಣಿ ದುರಂತದಲ್ಲಿ ಸಾವಿಗೀಡಾದವರಿಗೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಸಂತಾಪ ಸಭೆ ಇಂದು ಹಳೆ ಬಂದರು ಕಾರ್ಮಿಕರ ಕಟ್ಟೆ ಬಳಿ ನಡೆಯಿತು.

ಬೆಳಿಗ್ಗೆ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭಗೊಳ್ಳುತ್ತಿದ್ದಂತೆ ಹಮಾಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಕಾರ್ಮಿಕರ ಕಟ್ಟೆ ಬಳಿ ಜಮಾಯಿಸಿ ಸಗಟು ಮಾರುಕಟ್ಟೆ ಮತ್ತು ಧಕ್ಕೆ ಪರಿಸರದಲ್ಲಿ ಮೌನ ಮೆರವಣಿಗೆ ನಡೆಸಿ ನಂತರ ಸಂತಾಪ ಸಭೆ ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಮತ್ತು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ದೋಣಿ ದುರಂತ ಮೀನುಗಾರರನ್ನು ಮಾತ್ರ ಅಲ್ಲ ಇಡೀ ಕರಾವಳಿಯ ಜನರನ್ನು ದಿಗ್ಭ್ರಮೆಗೊಳಿಸಿದೆ. ಆಕಸ್ಮಿಕ ಅವಘಢ 6ಜನರನ್ನು ಬಲಿ ಪಡೆದಿದೆ. ಸಮುದ್ರ ಪಾಲಾದ 6ಮಂದಿ ಮೀನುಗಾರರಿಗೆ ಸರಕಾರ ತಲಾ 25ಲಕ್ಷ ರೂಪಾಯಿ ಪರಿಹಾರ ಮತ್ತು ಪ್ರತಿ ಸಂತ್ರಸ್ತ ಕುಟುಂಬಕ್ಕೆ ಸರಕಾರಿ ನೌಕರಿ ಘೋಷಣೆ ಮಾಡಬೇಕು ಮತ್ತು ಮೀನುಗಾರಿಕೆಯಲ್ಲಿ ತೊಡಗುವ ಮೀನುಗಾರರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಅವರು ಒತ್ತಾಯಿಸಿದರು ಮತ್ತು ಪರಿಹಾರ ನೀಡಿಕೆಯಲ್ಲಿ ಜಿಲ್ಲಾಡಳಿತ ವಿಳಂಬ ಮಾಡಿದರೆ ಮೀನುಗಾರಿಕಾ ಕಾರ್ಮಿಕರನ್ನು ಸಂಘಟಿಸಿ ಹೋರಾಟ ಹಮ್ಮಿಕೊಳ್ಳಬೇಕಾದೀತು ಎಂದು ಅವರು ಇದೇ ಸಂಧರ್ಭದಲ್ಲಿ ಎಚ್ಚರಿಸಿದರು.

ಸಭೆಯಲ್ಲಿ ಬಂದರು ಶ್ರಮಿಕರ ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್, ಉಪಾಧ್ಯಕ್ಷರಾದ ಹಸನ್ ಮೋನು ಬೆಂಗ್ರೆ, ಕೋಶಾಧಿಕಾರಿ ಹರೀಶ್ ಕೆರೆಬೈಲ್, ಒಣಮೀನು ವಿಭಾಗದ ಅಧ್ಯಕ್ಷರಾದ ಮೊಹಮ್ಮದ್ ಮೋನು ಕಾರ್ಯದರ್ಶಿ ಮಯ್ಯದ್ದಿ ಬೆಂಗ್ರೆ, ಮುಖಂಡರಾದ ಫಾರೂಕ್ ಉಳ್ಳಾಲ, ಮಜೀದ್ ಉಳ್ಳಾಲ, ಚಂದ್ರಹಾಸ್ ಕುತ್ತಾರ್, ಸಿದ್ದಿಕ್ ಬೆಂಗ್ರೆ, ಮೊಯಿದಿನ್ ಕಲ್ಕಟ್ಟೆ ಲ್, ಮಾದವ ಕಾವೂರ್ ಮುಂತಾದವರು ಉಪಸ್ಥಿತರಿದ್ದರು.


Spread the love