ದ್ವಿಚಕ್ರ ವಾಹನ ಕಳವು ಪ್ರಕರಣ: ಇಬ್ಬರ ಬಂಧನ, ಕಳವಾದ ಬೈಕ್ ವಶಕ್ಕೆ
ಬೆಳ್ತಂಗಡಿ: ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ವೇಣೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳವಾದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕುಕ್ಕೇಡಿ ನಿವಾಸಿ ಸಂಪತ್ ಕುಮಾರ್ (28) ಎಂಬವರು, ದಿನಾಂಕ 10.11.2025 ರಂದು ರಾತ್ರಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಾನೂರು ಶ್ರೀ ಗುರುನಾರಾಯಣ ವೃತ್ತದ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೋಟಾರು ಸೈಕಲ್ (ನಂ. KA-18-J-6348) ಕಳವುಗೊಂಡ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 88/2025 ಕಲಂ 303(2) ಬಿ.ಎನ್.ಎಸ್. 2023ರ ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ವೇಳೆ ವೇಣೂರು ನಿವಾಸಿ ಮಹಮ್ಮದ್ ಇರ್ಷಾದ್ (25) ಹಾಗೂ ಪಡಂಗಡಿ ನಿವಾಸಿ ಸಾದಿಕ್ ಖಾನ್ (26) ಅವರನ್ನು ಪೊಲೀಸರು ಬಂಧಿಸಿದ್ದು, ಕಳವಾದ ದ್ವಿಚಕ್ರ ವಾಹನವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಕಾರ್ಯಾಚರಣೆ ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ನಿರ್ದೇಶನದಂತೆ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಾಪೂರ ಮಠ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಅಕ್ಷಯ ಡವಗಿ, ಓಮನ ಎನ್., ಎ.ಎಸ್.ಐ. ವೆಂಕಟೇಶ್ ನಾಯ್ಕ, ಮುಖ್ಯ ಆರಕ್ಷಕ ಕೃಷ್ಣ, ಮಹಿಳಾ ಮುಖ್ಯ ಆರಕ್ಷಕಿ ಕೇಶವತಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಬಸವರಾಜ್ ಮತ್ತು ಮೋಹನ್ ಅವರನ್ನೊಳಗೊಂಡ ತಂಡ ಈ ಯಶಸ್ವೀ ಕಾರ್ಯಾಚರಣೆ ನಡೆಸಿದೆ.
