ಧಮ್ಮಿದ್ದರೆ, ತಾಕತ್ತಿದ್ದರೆ ನಮ್ಮ ವಿರುದ್ದ ಹೊರಿಸಲಾದ ಭ್ರಷ್ಟಾಚಾರ ಸಾಬೀತುಪಡಿಸಿ: ರಾಜ್ಯ ಸರ್ಕಾರದ ವಿರುದ್ದ ಬಿಕೆ ಹರಿಪ್ರಸಾದ್ ವಾಗ್ದಾಳಿ

Spread the love

ಧಮ್ಮಿದ್ದರೆ, ತಾಕತ್ತಿದ್ದರೆ ನಮ್ಮ ವಿರುದ್ದ ಹೊರಿಸಲಾದ ಭ್ರಷ್ಟಾಚಾರ ಸಾಬೀತುಪಡಿಸಿ: ರಾಜ್ಯ ಸರ್ಕಾರದ ವಿರುದ್ದ ಬಿಕೆ ಹರಿಪ್ರಸಾದ್ ವಾಗ್ದಾಳಿ

ಕುಂದಾಪುರ: ಅಭಿವೃದ್ದಿಯ ವಿಚಾರದಲ್ಲಿ ಚುನಾವಣೆ ಎದುರಿಸಲಾಗದ ಬಿಜೆಪಿ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪ ಯಾವೊಬ್ಬ ಸಚಿವರ ಮೇಲೂ ಬಂದಿಲ್ಲ‌. ಅತ್ಯಂತ ಸ್ವಚ್ಛವಾದ ಆಡಳಿತವನ್ನು ರಾಜ್ಯದ ಜನತೆಗೆ ಕೊಟ್ಟಿದ್ದೇವೆ. ಬಿಜೆಪಿಗೆ ತಾಕತ್ತಿದ್ದರೆ, ಧಮ್ಮಿದ್ದರೆ ನಮ್ಮ ಮೇಲೆ ಹೊರಿಸಿರುವ ಭ್ರಷ್ಟಾಚಾರ ಆರೋಪವನ್ನು ಸಾಬೀತು ಮಾಡಲಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ವಂಡ್ಸೆಯಲ್ಲಿ ಭಾನುವಾರ ವಂಡ್ಸೆ ಬ್ಲಾಕ್‌ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯಲ್ಲಿರುವ ಭ್ರಷ್ಟಾಚಾರಿಗಳನ್ನು ಜೈಲಿಗೆ ಹಾಕುವುದಾದರೆ ಜೈಲು ಸಾಕಾಗುವುದಿಲ್ಲ. ಅಷ್ಟರಮಟ್ಟಿಗೆ ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಭ್ರಷ್ಟಾಚಾರಿಗಳನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ‌‌. ಆದರೆ ಗುತ್ತಿಗೆದಾರ ಸಂಘದ ಅಧ್ಯಕ್ಷರು ನೇರವಾಗಿ‌ ಪ್ರಧಾನಿ ಮೋದಿಗೆ ಪತ್ರ ಬರೆದು ರಾಜ್ಯ ಸರ್ಕಾರದ ಬಗ್ಗೆ ಭ್ರಷ್ಟಾಚಾರ ಆರೋಪ ಹೊರಿಸಿದರೂ ಪ್ರಧಾನಿ ಕ್ರಮ ಕೈಗೊಂಡಿಲ್ಲ. ಇದನ್ನೆಲ್ಲಾ ಗಮನಿಸಿದರೆ 40% ಪ್ರಧಾನಿ ಮೋದಿಗೂ ಸೇರಿರಬಹುದು. ಪ್ರಧಾನಿ ಮೋದಿಯವರಿಗೆ ದೇಶದ ಕಾಳಜಿಗಿಂತ ಅವರ ಹಿಂಬಾಲಕರ ಕಾಳಜಿ ವಹಿಸುವುದೇ ಆದ್ಯತೆಯಾಗಿದೆ ಎಂದು ವ್ಯಂಗ್ಯವಾಡಿದರು.

ಪ್ರಕೃತಿ ವಿಕೋಪ, ಸಮಸ್ಯೆಗಳು ಕಾಣಿಸಿಕೊಂಡಾಗ ರಾಜ್ಯಕ್ಕೆ ಬಾರದ ಬಿಜೆಪಿ ಪಕ್ಷದ ದೊಡ್ಡ ದೊಡ್ಡ ನಾಯಕರು ಇದೀಗ ಚುನಾವಣೆ ಪರ್ವಕಾಲದಲ್ಲಿ ಇಲ್ಲಿಗೆ ಯಾಕೆ ಪದೆ ಪದೆ ಬರುತ್ತಿದ್ದಾರೆ ಎಂದು ಈ ಬಾರಿ ಮತದಾರರೇ ತೀರ್ಮಾನಿಸುತ್ತಾರೆ. ಕಾಂಗ್ರೆಸ್ ಪಕ್ಷ ಬದುಕಿನ ಬಗ್ಗೆ ಮಾತ್ರ ಮಾತನಾಡುತ್ತದೆ, ಯಾವುದೇ ಕಾರಣಕ್ಕೂ ಜನರ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡೋದಿಲ್ಲ. ಆದರೆ ಬಿಜೆಪಿಯದು ದೇಶಭಕ್ತಿಯ ರಾಜಕಾರಣ ಅಲ್ಲ‌. ಅವರದ್ದೇನಿದ್ದರೂ ದ್ವೇಷಭಕ್ತಿಯ ರಾಜಕಾರಣ ಎಂದರು.

ಕಾಂಗ್ರೆಸ್ ಪಕ್ಷ ತನ್ನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಕೇವಲ ಭರವಸೆ ಮಾತ್ರ ನೀಡೋದಿಲ್ಲ. ಹೇಳಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತದೆ. ಕುಂದಗನ್ನಡ ಅಭಿವೃದ್ಧಿಯ ಬಗ್ಗೆ ಪ್ರತ್ಯೇಕ ವಿಭಾಗ ಮಾಡಿ ಕೆಲಸ ಮಾಡುತ್ತೇವೆ. ಬಿಜೆಪಿ ಸರ್ಕಾರದ ಹಳೆ ಕಾರ್ಯಕ್ರಮಗಳನ್ನೆ ಮತ್ತೆ ಬಜೆಟ್ ನಲ್ಲಿ ಹೇಳಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆ ಮಾಡಿದ್ದ ಅನೇಕ ಜನಪರ ಕಾರ್ಯಕ್ರಮಗಳನ್ನು ಗಾಳಿಗೆ ತೂರಿರುವ ಬಿಜೆಪಿ ಸರ್ಕಾರ ಗಾಳಿಗೆ ತೂರಿದೆ. ಅದಾನಿ ಕಂಪೆನಿಗೆ ಸಾಲ ನೀಡಿದ ಎಲ್ಐಸಿ ಹಾಗೂ ಸ್ಟೇಟ್ ಬ್ಯಾಂಕ್ ಬಗ್ಗೆ ಕೇಂದ್ರ ಸರ್ಕಾರ ಮೌನ ಮುರಿಯುತ್ತಿಲ್ಲ. ಬಿಜೆಪಿಯಲ್ಲಿ ಭ್ರಷ್ಟಾಚಾರದ ವೈಭವೀಕರಣವಾಗುತ್ತಿದೆ ಎಂದರು.

ಕೆಪಿಸಿಸಿ ಮಾಧ್ಯಮ ವಿಭಾಗದ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಅವರು, ಬಡವರ ಪರವಾಗಿ ಕೆಲಸ ಮಾಡಿರುವ ಸಿದ್ದರಾಮಯ್ಯ ಅವರನ್ನು ಮುಗಿಸಿಬಿಡಿ ಎಂದು ಹೇಳಿಕೆ ನೀಡುವ ಮನಸ್ಥಿತಿ ಬಿಜೆಪಿ ಪಕ್ಷದ ಮಂತ್ರಿ ಅಸ್ವಸ್ಥ ನಾರಾಯಣ ಅಲ್ಲದೆ ಬೇರೆಯವರಿಗೆ ಬರೋದಿಲ್ಲ. ಶಾಸಕ ಎಂದರೆ ಶಾಸನಬದ್ಧ ಅಧಿಕಾರ ಚಲಾಯಿಸಬೇಕು. ತಮ್ಮ ಶಾಸಕತ್ವ ಅವಧಿಯಲ್ಲಿ ಒಂದು ಬಾರಿಯೂ ಅಕ್ರಮ-ಸಕ್ರಮ ಸಮಿತಿ ಸಭೆಯನ್ನೆ ಮಾಡದವರನ್ನು ಶಾಸಕರೆಂದು ಒಪ್ಪಿಕೊಳ್ಳುವುದು ಹೇಗೆ. ಇಲ್ಲಿನ ಬ್ಯಾಂಕ್ ವಿಲೀನ ಮಾಡುವಾಗ, ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಅವಮಾನಿಸುವಾಗ ಮಾತನಾಡದ ಬಿಜೆಪಿಯಿಂದ ಸಾಮಾಜಿಕ ನ್ಯಾಯ ದೊರಕಲು ಸಾಧ್ಯವಿಲ್ಲ. ಬ್ಯಾನರ್ ಹರಿಯುವ ಮೂಲಕ ವಿಕೃತ ಮನಸ್ಥಿತಿಯನ್ನು ಬಿಜೆಪಿ ತೋರುತ್ತಿದೆ. ಮನಸ್ಸು ಮನಸ್ಸು ಕಟ್ಟುವ ಸಂಸ್ಕೃತಿ ಹಾಗೂ ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, 4 ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬಿಜೆಪಿ ಪಕ್ಷದ ಸುಳ್ಳು ಹಾಗೂ ಅಪಪ್ರಚಾರದಿಂದ ಕಳೆದ ಚುನಾವಣೆಯಲ್ಲಿ ಸೋಲಾಯಿತು. ಕಳೆದ ಚುನಾವಣೆಯಲ್ಲಿ ಸುಳ್ಳು ಹೇಳಿ ಪರೇಶ್ ಮೇಸ್ತಾ ಅವರ ಸಾವನ್ನು ರಾಜಕೀಯ ಲಾಭವಾಗಿಸಿಕೊಂಡಿದ್ದ ಬಿಜೆಪಿಗರು ಇದೀಗ ಸಿಬಿಐ ವರದಿ ಬಂದ ಬಳಿಕ ತುಟಿ ಬಿಚ್ಚುತ್ತಿಲ್ಲ. ಉದಯ್ ಗಾಣಿಗರ ಕೊಲೆಗೆ ನ್ಯಾಯ ದೊರಕಿಸುವ ಕೆಲಸ ಬಿಜೆಪಿಯಿಂದ ಆಗಿಲ್ಲ. ನಾನು ಒಬ್ಬನೇ ಅಲ್ಲ ನನ್ನೊಂದಿಗೆ ಕ್ಷೇತ್ರದ ಜನರಿದ್ದಾರೆ. ಬೈಂದೂರಿನಲ್ಲಿ ನಿರ್ಮಾಣವಾಗಬೇಕಿದ್ದ ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಐದು ಹೊಳೆಗಳ ಸೇರ್ಪಡೆ ಯೋಜನೆಗಳು ಏನಾಯಿತು ಎಂದು ಪ್ರಶ್ನಿಸಿದ ಅವರು ಸೋಲಿಗೆ ಹೆದರಿ ಓಡಿಹೋಗುವ ಜಾಯಮಾನ ನನ್ನದಲ್ಲ. ಇಲ್ಲಿಯೇ ಹೋರಾಟ ಮಾಡುತ್ತೇನೆ . ಕಾಲು ಪೆಟ್ಟಾಗಿ ಮನೆಯಲ್ಲಿ ಮಲಗಿದ್ದಾಗ ಪಕ್ಷಾತೀತವಾಗಿ ನನಗೆ ಸಾಂತ್ವನ ಹೇಳಿ ಮಾನಸಿಕ ಧೈರ್ಯ ತುಂಬಿರುವುದನ್ನು ಮರೆಯುವುದಿಲ್ಲ. ಅಭಿವೃದ್ಧಿಯ ಕಾರ್ಯಗಳನ್ನು ತುಲನೆ ಮಾಡಿ ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡಿ ಎಂದರು.‌

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿದರು.

ವಂಡ್ಸೆ, ಆಲೂರು, ಹರ್ಕೂರು, ಗುಜ್ಜಾಡಿ ಮುಂತಾದ ಗ್ರಾಮಗಳಿಂದ ನೂತನವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರನ್ನು ಪಕ್ಷದ ಧ್ವಜ ನೀಡಿ ಬರಮಾಡಿಕೊಳ್ಳಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಮುಖಂಡರಾದ ಮುರಳೀಧರ ಶೆಟ್ಟಿ ಇಂದ್ರಾಳಿ, ದಿವಾಕರ ಕುಂದರ್, ಎಸ್.ಪ್ರಕಾಶ್ಚಂದ್ರ‌ ಶೆಟ್ಟಿ, ರಾಜು ಎಸ್ ಪೂಜಾರಿ, ವಾಸುದೇವ ಯಡಿಯಾಳ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ರೋಶನ್ ಕುಮಾರ್ ಶೆಟ್ಟಿ ಪಕ್ಷದ ಪ್ರಮುಖರಾದ ಮದನ ಕುಮಾರ್ ಉಪ್ಪುಂದ, ಜಯರಾಮ್ ಶೆಟ್ಟಿ ವಂಡಬಳ್ಳಿ, ಉದಯಕುಮಾರ್ ಶೆಟ್ಟಿ ಅಡ್ಕೆಕೊಡ್ಲು, ರಘುರಾಮ ಶೆಟ್ಟಿ ಬಿಜೂರು, ಅನಂತ ಮೊವಾಡಿ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ಶರತ ಕುಮಾರ ಶೆಟ್ಟಿ ಬಾಳಿಕೆರೆ, ಸಂಜಯ್ ಪೂಜಾರಿ ಪಡುಕೋಣೆ, ಅರವಿಂದ ಪೂಜಾರಿ ಪಡುಕೋಣೆ, ಉದಯ್ ಪೂಜಾರಿ ವಂಡ್ಸೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಜಯರಾಮ್ ನಾಯ್ಕ್, ನಾಗಪ್ಪ ಕೊಠಾರಿ ಎನ್‌ಎಸ್‌ಯುಐ ಪ್ರಮುಖರಾದ ಅನ್ವೀತ್ ಕಟೀಲ್, ಅನೀಶ್ ಪೂಜಾರಿ ಬೈಂದೂರು, ಸುಜನ್ ಶೆಟ್ಟಿ ಕುಂದಾಪುರ, ಅರುಣ್ ಹಕ್ಲಾಡಿ, ಗಣೇಶ್ ಪ್ರಸಾದ್ ಶೆಟ್ಟಿ ಬಾಳಿಕೆರೆ, ಸೈಯದ್ ಫುರ್ಖಾನ್ ಯಾಸೀನ್ ಇದ್ದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿದರು, ಮಹಿಳಾ ಕಾಂಗ್ರೆಸ್ ಸಮಿತಿ ಸುನೀತಾ ಶೆಟ್ಟಿ ಕೊಕ್ಕರ್ಣೆ ನಿರೂಪಿಸಿದರು.


Spread the love