ಧರೆಗುರುಳಿದ ಮರದಿಂದ ಕಾರುಗಳು ಜಖಂ

Spread the love

ಧರೆಗುರುಳಿದ ಮರದಿಂದ ಕಾರುಗಳು ಜಖಂ

ಮೈಸೂರು: ನಗರದ ಶ್ರೀಹರ್ಷ ರಸ್ತೆಯಲ್ಲಿ ಭಾರೀ ಮರವೊಂದು ದಿಢೀರ್ ಧರೆಗುರುಳಿದ ಪರಿಣಾಮ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಲ್ಲ.

ಬೃಹತ್ ಗಾತ್ರದ ಗುಲ್ಮೊಹರ್ ಮರವೊಂದು ಬುಡದ ಸಡಿಲದಿಂದಾಗಿ ಧರೆಗುರುಳಿದೆ. ಡಾ.ರಾಜ್ ಕುಮಾರ್ ಪಾರ್ಕ್‌ನಲ್ಲಿ ಮರವಿದ್ದು, ಸಿಟಿ ಕೋ ಆಪರೇಟಿವ್ ಎದುರಿನ ರಸ್ತೆಗೆ ಮರ ಉರುಳಿದ ಪರಿಣಾಮ ಇಲ್ಲಿನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ನಾಲ್ಕು ಕಾರುಗಳು ಮತ್ತು ಒಂದು ಸ್ಕೂಟರ್ ಹಾಗೂ ಕಬ್ಬಿಣದ ಸರಳಿನ ಬೇಲಿ, ಪೆಟ್ಟಿಗೆ ಆಕಾರದ ತಳ್ಳುವ ಗಾಡಿಯೊಂದು ಜಖಂಗೊಂಡಿದೆ. ಮರ ಉರುಳಿದ ಪರಿಣಾಮ ಕೆಲ ಕಾಲ ವಿದ್ಯುತ್ ಸ್ಥಗಿತಗೊಂಡಿತು. ಅಲ್ಲದೇ, ಕೇಬಲ್, ಟೆಲಿಪೋನ್ ಸಂಪರ್ಕದ ವೈರುಗಳು ಕಿತ್ತುಹೋಗಿದ್ದವು. ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ಜನರ ಸಂಚಾರ ಹೆಚ್ಚು ಇರಲಿಲ್ಲ. ಹೀಗಾಗಿ, ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಜಖಂಗೊಂಡಿರುವ ನಾಲ್ಕು ಕಾರುಗಳ ಪೈಕಿ ಒಂದು ಕಾರಿನಲ್ಲಿ ಮಾತ್ರ ಕುಳಿತಿದ್ದು, ಇಷ್ಟು ಬೃಹತ್ ಗಾತ್ರದ ಮರ ಬಿದ್ದಾಗ್ಯೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ರಸ್ತೆಯಲ್ಲಿ 2021ರ ನವೆಂಬರ್‌ನಲ್ಲಿಯೂ ಹೀಗೆ ಮರವೊಂದು ಉರುಳಿ ಮೂರು ಕಾರುಗಳು ಮತ್ತು ೫ ಬೈಕ್‌ಗಳು ಜಖಂಗೊಂಡಿದ್ದವು. ಮರದ ಬುಡವನ್ನು ಗೆದ್ದಲು ತಿನ್ನುವ ಕಾರಣ, ಮರವು ನಿಲ್ಲುವ ಶಕ್ತಿ ಕಳೆದುಕೊಳ್ಳುತ್ತದೆ. ಹೀಗಾಗಿ, ಇಂತಹ ಘಟನೆಗಳು ನಡೆಯುತ್ತವೆ. ಆದ್ದರಿಂದ, ಹೀಗೆ ಬುಡ ಸಡಿಲವಾಗಿದ್ದು, ದುರ್ಬಲವಾಗಿರುವ ಮರಗಳನ್ನು ಸೂಕ್ತ ಮತ್ತು ಸುರಕ್ಷಿತ ರೀತಿಯಲ್ಲಿ ತೆರವುಗೊಳಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಮಾಡಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಪಾಲಿಕೆಯ ಅಭಯ ತಂಡದ ನೇತೃತ್ವದಲ್ಲಿ ಅರಣ್ಯ ಮತ್ತು ಸೆಸ್ಕ್ ಸಿಬ್ಬಂದಿ ಸೇರಿದಂತೆ ಸುಮಾರು ಸುಮಾರು 10 ಸಿಬ್ಬಂದಿಗಳು ತೆರವು ಕಾರ್ಯಾಚರಣೆ ಮಾಡಿ ಮರ ಕತ್ತರಿಸುವ ಯಂತ್ರಗಳಿಂದ ಮರದ ಕೊಂಬೆಗಳನ್ನು ತುಂಡರಿಸಿ, ಮರವನ್ನು ತೆರವುಗೊಳಿಸಿದ್ದಾರೆ.


Spread the love