
ಧರ್ಮದ ಮಾರ್ಗದಿಂದ ಯಶಸ್ಸು ಸಾಧ್ಯ: ಕೋಡಿಶ್ರೀ
ಕೆ.ಆರ್.ಪೇಟೆ: ಧರ್ಮದ ಮಾರ್ಗದಲ್ಲಿ ಸಾಗಿದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯುವ ಜೊತೆಗೆ ಮಾಡುವ ಕಾರ್ಯದಲ್ಲಿ ಯಶಸ್ಸನ್ನು ಕಾಣಬಹುದು ಎಂದು ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಪೀಠಾಧಿಪತಿಗಳಾದ ಡಾ.ಶ್ರೀ ಸದಾಶಿವ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಹೇಳಿದರು.
ಪಟ್ಟಣದ ಹೊರವಲಯದ ಕಿಕ್ಕೇರಿ ರಸ್ತೆಯಲ್ಲಿ ಸರ್ಕಾರಿ ಅಭಿಯೋಜನಕ ರಾಜೇಶ್ ಹಾಗೂ ಶಿಕ್ಷಕಿ ಶ್ರೀಮತಿ ಅಖಿಲರಾಜೇಶ್ ದಂಪತಿಗಳು ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಮುಚ್ಛಯದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಭಗವಂತನ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ, ನಿಷ್ಕಲ್ಮಶವಾದ ಮನಸ್ಸಿನಿಂದ ಭಗವಂತನನ್ನು ಪ್ರಾರ್ಥಿಸಿ ಪೂಜಿಸಿ ಆರಾಧಿಸಿದರೆ ಭಗವಂತನ ಒಲುಮೆಗೆ ಪಾತ್ರರಾಗಬಹುದು. ನಮ್ಮ ಮನಸ್ಸಿನ ಒತ್ತಡಗಳು ಹಾಗೂ ದ್ವೇಷ ಅಸೂಯೆಯನ್ನು ಹೋಗಲಾಡಿಸಿಕೊಂಡು ಮಾನಸಿಕವಾಗಿ ನೆಮ್ಮದಿಯನ್ನು ಪಡೆಯಲು ಶರಣ ಶ್ರದ್ಧಾಕೇಂದ್ರವಾಗಿರುವ ದೇವಾಲಯಗಳಿಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಹೋಗಿ ಅರ್ಧ ಗಂಟೆ ಪ್ರಾರ್ಥನೆ ಸಲ್ಲಿಸಿದರೆ ಸಾಕು ೆಂದರು.
ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ದ್ವೇಷಾಸೂಯೆಗಳು ಮೇಳೈಸುತ್ತಿವೆ. ಮಕ್ಕಳು ಮೊಬೈಲ್ ಫೋನಿನ ದಾಸರಾಗಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮರೆತು ದಿಕ್ಕುತಪ್ಪಿ ಸಮಾಜ ಕಂಟಕರಾಗುತ್ತಿದ್ದಾರೆ. ಗುರು-ಹಿರಿಯರು ಹಾಗೂ ತಂದೆ-ತಾಯಿಗಳನ್ನು ಗೌರವಿಸುವ ಬದಲಿಗೆ ಅವರನ್ನೇ ಅವಮಾನಿಸುವ ಕೆಟ್ಟ ದೃಷ್ಠಿಯಿಂದ ನೋಡುವ ಹಣ ಆಸ್ತಿಯ ದುರಾಸೆಯಿಂದ ಯಾವುದೇ ಕೆಟ್ಟ ಕೆಲಸ ಮಾಡುವ ಮಟ್ಟಕ್ಕೆ ಇಂದಿನ ಯುವಜನರು ಇಳಿದಿದ್ದಾರೆಂದರು.
ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡಿಸಿ ಶಿಕ್ಷಣದ ಜ್ಞಾನದ ಬೆಳಕಿನ ಸಂಸ್ಕಾರವನ್ನು ಕೊಡಿಸಿ ಸನ್ಮಾರ್ಗದಲ್ಲಿ ಸಾಗಿ ಜೀವನದಲ್ಲಿ ಗುರಿಮುಟ್ಟುವಂತೆ ಪ್ರೇರೇಪಿಸಬೇಕು. ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಗುರುಹಿರಿಯರನ್ನು ಗೌರವಿಸುವ ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯುವಂತೆ ಮಾರ್ಗದರ್ಶನ ಮಾಡಬೇಕು ಎಂದು ಕೋಡಿಶ್ರೀಗಳು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಜನತೆಯ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸಿ ಕೆಲಸ ಮಾಡುವ ಮೂಲಕ ಜನಾದೇಶದ ತೀರ್ಪಿಗೆ ಅನುಗುಣವಾಗಿ ಐದು ವರ್ಷಗಳನ್ನು ಸಂಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಮಾಜಿಶಾಸಕ ಬಿ.ಪ್ರಕಾಶ್, ವಕೀಲರಾದ ಗಂಜಿಗೆರೆ ಲೋಕೇಶ್, ಬಂಡಿಹೊಳೆ ಗಣೇಶ್, ಮುಖಂಡರಾದ ಚಂದ್ರಶೇಖರ್, ಶ್ರೀಧರ ಸಿರಿವಂತ್, ಮನು-ಶರತ್, ಬಳ್ಳೇಕೆರೆ ವರದರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.