ಧರ್ಮ ಮತ್ತು ವಿಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸಿದರೆ ಲೌಕಿಕ ಸಂಪತ್ತು ವೃದ್ಧಿ: ಮಂಜುನಾಥ್

Spread the love

ಧರ್ಮ ಮತ್ತು ವಿಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸಿದರೆ ಲೌಕಿಕ ಸಂಪತ್ತು ವೃದ್ಧಿ: ಮಂಜುನಾಥ್

ಮೂಡುಬಿದಿರೆ : “ಸದಾ ಸಕಾರಾತ್ಮಕ ಚಿಂತನೆಯಿಂದ ಯುವಕರನ್ನು ಪ್ರೋತ್ಸಾಹಿಸಬೇಕು. ಹಾಗೆಯೇ, ಮಾನಸಿಕ ಹಾಗೂ ದೈಹಿಕ ಶಿಕ್ಷಣಕ್ಕೆ ಮಹತ್ವ ಕೊಡಬೇಕು. ಶಿಕ್ಷಣದ ಮೂಲಕ ಮಾನವೀಯತೆ ವಿಕಸನವಾಗುವುದಲ್ಲದೆ, ಧರ್ಮ ಮತ್ತು ವಿಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸಿದಾಗ ಲೌಕಿಕ ಸಂಪತ್ತು ವೃದ್ಧಿಗೊಳ್ಳುತ್ತದೆ” ಎಂದು ಖೋ ಖೋ ಆಟಗಾರ ಮಂಜುನಾಥ್ ಹೇಳಿದರು.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಪಿಜಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನದ ಅಂಗವಾಗಿ ನಡೆದ ನಾಯಕತ್ವ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ‘ವಿದ್ಯೆಯನ್ನು ಕಲಿತವರು ಬಡವರನ್ನು ನಿರ್ಲಕ್ಷ್ಯ ಮಾಡಿದರೆ ಅವರು ದೇಶ ದ್ರೋಹಿಗಳಿಗೆ ಸಮಾನ. ವ್ಯವಸಾಯವನ್ನು ಉದ್ಯೋಗವನ್ನಾಗಿಸಿ, ಕೃಷಿ ಕಾರ್ಮಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು’ ಎಂದರು.

ಕಾರ್ಯಾಗಾರದ ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ ಕ್ರಿಕೆಟ್‍ಪಟು ವಿಷ್ಣುಚೈತನ್ಯ, ‘ಉತ್ತಮ ಭವಿಷ್ಯಕ್ಕಾಗಿ ಜಾಗೃತಿ ಮೂಡಿಸಿ, ಯುವಜನತೆಯಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಚಾರಿತ್ರ್ಯ ನಿರ್ಮಾಣದ ಕಡೆಗೆ ಗಮನ ಹರಿಸುವಂತೆ ಮಾಡುವುದು ರಾಷ್ಟೀಯ ಯುವ ದಿನಾಚರಣೆಯ ಮುಖ್ಯ ಉದ್ದೇಶ. ಈ ಸಂದರ್ಭ, ಬಡವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಆದಷ್ಟು ಸಹಾಯಮಾಡಬೇಕು’ ಎಂದು ಸ್ವಾಮಿ ವಿವೇಕಾನಂದರ ತತ್ವಗಳನ್ನು ತಿಳಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಸ್ಕೆಟ್‍ಬಾಲ್ ಆಟಗಾರ ಶಮಂತ್ ಮಾತನಾಡಿ, ‘ಋಗ್ವೇದ ಕಾಲದಲ್ಲಿ ಮಹಿಳೆಯರಿಗೆ ಬಹಳಷ್ಟು ಗೌರವ ಸಿಗುತ್ತಿತ್ತು. ಆದರೆ ಮಹಿಳೆಯರು ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳವಣಿಗೆಯಾದಷ್ಟು, ಸಮಾಜದಲ್ಲಿ ಅವರ ಮಹತ್ವ ಕಡಿಮೆಯಾಗುತ್ತಿದೆ’ ಎಂದರು. ಜತೆಗೆ ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಇರುವ ಕಾಯ್ದೆ ಹಾಗೂ ನಿಬಂಧನೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ಪ್ರಾಚಾರ್ಯ ಮಧು ಜಿ.ಆರ್ ಉಪಸ್ಥಿತರಿದ್ದರು. ಪದವಿ ಹಾಗೂ ಸ್ನಾತ್ತಕೋತ್ತರ ದೈಹಿಕ ಶಿಕ್ಷಣದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾರ್ಯಾಗಾರದ ಪ್ರಯೋಜನವನ್ನು ಪಡೆದರು. ವಿದ್ಯಾರ್ಥಿ ಅರ್ಜುನ್ ಕಾರ್ಯಕ್ರಮ ನಿರೂಪಿಸಿ, ಅಣ್ಣಯ್ಯ ಧನ್ಯವಾದ ಸಮರ್ಪಿಸಿದರು.

ಬಾಕ್ಸ್ ಐಟಂ: ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005; ವರದಕ್ಷಿಣೆ ನಿಷೇಧ ಕಾಯ್ದೆ, 1961; ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ, 1986; ಲೈಂಗಿಕ ಅಪರಾಧಗಳ ವಿರುದ್ಧ ಕಾನೂನುಬದ್ಧವಾಗಿ ತಡೆಗಟ್ಟಲು ಅಪರಾಧ ಕಾನೂನು (ತಿದ್ದುಪಡಿಗಳು), ಕಾಯ್ದೆ 2013; ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ, 2018 ಇತ್ಯಾದಿ ಕಾಯಿದೆ ಹಾಗೂ ನಿಬಂಧನೆಗಳು ದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯನ್ನು ಒದಗಿಸುತ್ತದೆ” ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಸ್ಕೆಟ್‍ಬಾಲ್ ಆಟಗಾರ ಶಮಂತ್ ಹೇಳಿದರು.


Spread the love