ಧಾನ್ಯ ಲಕ್ಷ್ಮಿ ಮನೆ ತುಂಬಿಸಿಕೊಳ್ಳುವ ‘ಹುತ್ತರಿ’ ಹಬ್ಬ

Spread the love

ಧಾನ್ಯ ಲಕ್ಷ್ಮಿ ಮನೆ ತುಂಬಿಸಿಕೊಳ್ಳುವ ‘ಹುತ್ತರಿ’ ಹಬ್ಬ

ಕೊಡಗಿನವರ ಪಾಲಿನ ಸುಗ್ಗಿ ಹಬ್ಬವಾಗಿರುವ “ಹುತ್ತರಿ”ಯನ್ನು ಈ ಬಾರಿ ಡಿಸೆಂಬರ್ 7ರಂದು ಆಚರಿಸಲಾಗುತ್ತಿದೆ. ಹೀಗಾಗಿ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿದೆ. ದೂರದಲ್ಲಿದ್ದವರು ತಮ್ಮ ಊರಿನತ್ತ ಮುಖ ಮಾಡುತ್ತಿದ್ದಾರೆ.

ಹಬ್ಬಕ್ಕೆ ತಿಂಗಳು ಇರುವಾಗಲೇ ಹಿರಿಯರು ಮನೆಗೆ ಸುಣ್ಣ-ಬಣ್ಣ ಬಳಿದು ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಂಭ್ರಮದಲ್ಲಿದ್ದರೆ, ಮಕ್ಕಳಿಗೆ ಪಟಾಕಿ ಸಿಡಿಸಿ ಸಂತಸ ಪಡುವ ಕಾತರ ಹೆಚ್ಚಾಗಿರುತ್ತದೆ. ಇನ್ನು ಈ ಹಬ್ಬಕ್ಕೆ ಕೊಡಗಿನ ಸಂಸ್ಕೃತಿ, ಸಂಪ್ರದಾಯದ ಲೇಪನ, ಜಾನಪದದ ಹಿನ್ನಲೆಯಿದೆ. ಕೊಡಗಿನ ಮಳೆ ದೇವ ಎಂದೇ ಕರೆಯುವ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಾನದಲ್ಲಿ ಅಮ್ಮಂಗೇರಿಯ ಜ್ಯೋತಿಷ್ಯರು ದೇವತಕ್ಕರು, ನಾಡಿನ 13 ತಕ್ಕ ಮುಖ್ಯಸ್ಥರು, ಭಕ್ತ ಜನಸಂಘದ ಪದಾಧಿಕಾರಿಗಳು, ಸಮಾವೇಶಗೊಂಡು, ಹುತ್ತರಿ ಮುಹೂರ್ತವನ್ನು ನಿಶ್ಚಯಿಸುವುದು ನಡೆದು ಬಂದ ರೂಢಿಯಾಗಿದೆ. ಅಲ್ಲಿ ನಿಗದಿಯಾದ ದಿನಾಂಕ ಮತ್ತು ಸಮಯಕ್ಕೆ ಅನುಗುಣವಾಗಿ ಜಿಲ್ಲೆಯಾದ್ಯಂತ ಆಚರಣೆ ನಡೆಯುತ್ತದೆ.

ಹುತ್ತರಿ ಹಬ್ಬದ ದಿನದಂದು ಕುಟುಂಬದ ಸದಸ್ಯರೆಲ್ಲರೂ ಐನ್‌ಮನೆಯಲ್ಲಿ ಸೇರಿ ಮನೆಯ ’ನೆಲ್ಲಕ್ಕಿ’ ನಡುಬಾಡೆಯಲ್ಲಿ ತೂಗು ದೀಪದ ಕೆಳಗೆ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಹಲಸಿನ ಎಲೆ, ಕುಂಬಳಿ ಎಲೆ, ಕಾಡು ಗೇರು ಎಲೆ ಹೀಗೆ ಐದು ತರಹದ ಎಲೆಯನ್ನು ಹಾಗೂ ಕಾಡಿನಲ್ಲಿ ಸಿಗುವ ಅಚ್ಚುನಾರನ್ನು ಇರಿಸಲಾಗುತ್ತದೆ. ಮತ್ತೊಂದು ಕುಕ್ಕೆಯ ತುಂಬ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರಿನಲ್ಲಿ ಅಕ್ಕಿ ತುಂಬಿಡಲಾಗುತ್ತದೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡಲಾಗುತ್ತದೆ. ಇದರ ಪಕ್ಕದಲ್ಲಿ ಕುಡುಗೋಲು, ಮುಕ್ಕಾಲಿಯ ಮೇಲೆ ’ತಳಿಯಕ್ಕಿ ಬೊಳ್ಚ’ ಮೂರು ವೀಳ್ಯದೆಲೆ ಹಾಗೂ ಮೂರು ಅಡಿಕೆಯನ್ನು ಇಡಲಾಗುತ್ತದೆ.

ಮುತೈದೆಯರು ಅಕ್ಕಿ ಹಿಟ್ಟಿನಿಂದ ಹಬ್ಬಾಚರಣೆಗೆ ಇರಿಸಲಾದ ವಸ್ತುಗಳ ಮುಂದೆ ರಂಗೋಲಿ ಇಡುತ್ತಾರೆ. ಬಳಿಕ ದೇವರನ್ನು ಪ್ರಾರ್ಥಿಸುತ್ತಾ ಎಲೆಗಳನ್ನು ಸಂಪ್ರದಾಯದಂತೆ ಒಂದರ ಮೇಲೊಂದು ಇಟ್ಟು ನಾರಿನಿಂದ ಕಟ್ಟಲಾಗುತ್ತದೆ. ಇದನ್ನು ನೆರೆ ಕಟ್ಟುವುದು ಎಂದು ಕರೆಯುತ್ತಾರೆ. ಬಳಿಕ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾರೆ. ಜೊತೆಗೆ ಇತರೆ ತಿಂಡಿ ತೀರ್ಥಗಳೂ ಇರುತ್ತವೆ. ಇದನ್ನು ಫಲಹಾರ ಎನ್ನುತ್ತಾರೆ. ಫಲಹಾರದ ಬಳಿಕ ಸಿದ್ದಪಡಿಸಲಾದ ’ಕುತ್ತಿ’ಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬಂಧಿಕರು ಬರುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭ ಮುತೈದೆಯೊಬ್ಬರು ’ತಳಿಯಕ್ಕಿ ಬೊಳ್ಚ’ವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.

ಪೊಲಿ ಪೊಲಿ ದೇವಾ: ಗದ್ದೆ ತಲುಪಿದ ಬಳಿಕ ಹಾಲುಜೇನು ಮೊದಲಾದುವುಗಳನ್ನು ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ಆ ನಂತರ ಹುತ್ತರಿ ಮೂಹೂರ್ತಕ್ಕೆ ಸುಸೂತ್ರವೆನಿಸುವಂತೆ ಗುಂಡೊಂದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯ ವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ ಕುಕ್ಕೆಯಲ್ಲಿ ಇಡಲಾಗುತ್ತದೆ. ಈ ಸಂದರ್ಭ ನೆರೆದವರು ’ಪೊಲಿ ಪೊಲಿ ದೇವಾ’ ಎಂದು ಘೋಷಣೆ ಕೂಗುತ್ತಾರೆ. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.

ಕದಿರು ತುಂಬಿದ ಕುಕ್ಕೆಯನ್ನು ತಲೆಯಲ್ಲಿ ಹೊತ್ತು ’ಪೊಲಿ ಪೊಲಿ ದೇವಾ’ ಎಂದು ಘೋಷಣೆ ಕೂಗುತ್ತಾ ಬರಲಾಗುತ್ತದೆ. ಅಲ್ಲದೆ ಕದಿರನ್ನು ಕೆಲವು ಕುಟುಂಬದವರು ದೇವಸ್ಥಾನಕ್ಕೆ ಅರ್ಪಿಸಿ ಬಳಿಕ ಮನೆಗೆ ತೆರಳಿದರೆ ಇನ್ನು ಕೆಲವರು ನೇರವಾಗಿ ಒಕ್ಕಲು ಕಣಕ್ಕೆ ತೆರಳಿ ಮನೆಗೆ ತೆರಳುತ್ತಾರೆ. ಮನೆಯಲ್ಲಿದ್ದ ಮುತೈದೆ ಕದಿರು ಕೊಯ್ದವನ ಕಾಲು ತೊಳೆದು ಹಾಲು ನೀಡಿ ಧಾನ್ಯ ಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಾರೆ. ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಂಡ ನಂತರ ಕದಿರನ್ನು ಆಯುಧ, ವಾಹನ ಮುಂತಾದವುಗಳಿಗೆ ಕಟ್ಟಲಾಗುತ್ತದೆ. ಬಳಿಕ ಮನೆಯಲ್ಲಿ ಹೊಸ ಅಕ್ಕಿ ಪಾಯಸ ಮಾಡಿ ಸದಸ್ಯರೆಲ್ಲಾ ಒಂದೆಡೆ ಕುಳಿತು ಊಟ ಮಾಡುತ್ತಾರೆ. ಹಬ್ಬದಲ್ಲಿ ವಿಶೇಷ ತಿನಿಸುಗಳಾದ ತಂಬುಟ್, ಅಡಿಕೆಹಿಟ್ಟು, ಕಜ್ಜಾಯ, ವಿವಿಧ ಬಗೆಯ ತರಕಾರಿ ಸಾರು, ಪಲ್ಯಗಳಿರುತ್ತದೆ.

ಹುತ್ತರಿ ಹಬ್ಬದ ಮಾರನೆಯ ದಿನ ಹುತ್ತರಿ ಹಾಡನ್ನು ಮನೆಮನೆಗಳಲ್ಲಿ ಹಾಡುವ ಪದ್ಧತಿಯೂ ಇದೆ. ಅಲ್ಲದೆ, ನಾಡ್‌ಮಂದ್‌ನಲ್ಲಿ (ಊರಿನ ದೊಡ್ಡ ಮೈದಾನದಲ್ಲಿ) ಊರಿನವರೆಲ್ಲಾ ಸೇರಿ ಹುತ್ತರಿ ಕೋಲಾಟ ನಡೆಸುತ್ತಾರೆ. ಆ ನಂತರ ಹಬ್ಬದ ಕಡೆಯ ದಿನವಾಗಿ “ಊರೋರ್ಮೆ” ನಡೆಯುತ್ತದೆ. ಊರವರೆಲ್ಲಾ ಗ್ರಾಮದ ಅಂಬಲ(ಮೈದಾನ)ದಲ್ಲಿ ನೆರೆಯುತ್ತಾರೆ. ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುತ್ತಾರೆ. ಅಲ್ಲಿಗೆ ಹುತ್ತರಿ ಹಬ್ಬದ ಸಂಭ್ರಮ ಮುಗಿಯುತ್ತದೆ. ಆದರೆ ಬಳಿಕವೂ ಸಂಘ ಸಂಸ್ಥೆಗಳು ತಮಗೆ ಅನುಕೂಲವಾದ ದಿನಗಳಲ್ಲಿ ಹುತ್ತರಿ ಸಂತೋಷಕೂಟಗಳನ್ನು ನಡೆಸುವ ಮೂಲಕ ಎಲ್ಲರೂ ಒಂದೆಡೆ ಸೇರಿ ಹುತ್ತರಿ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ.


Spread the love