ಧಾರಾಕಾರ ಮಳೆ: ಕುಂದಾಪುರ, ಬೈಂದೂರು ಪ್ರದೇಶದ ತಗ್ಗು ಪ್ರದೇಶಗಳು ಜಲಾವೃತ

Spread the love

ಧಾರಾಕಾರ ಮಳೆ: ಕುಂದಾಪುರ, ಬೈಂದೂರು ಪ್ರದೇಶದ ತಗ್ಗು ಪ್ರದೇಶಗಳು ಜಲಾವೃತ

ಕುಂದಾಪುರ: ಭಾನುವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ‌.

ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಸೌಪರ್ಣಿಕ ನದಿ ನೀರಿನ ಮಟ್ಟ ಹೆಚ್ಚುತ್ತಿದ್ದು, ನದಿ ತಟದಲ್ಲಿರುವ ಸಾಲ್ಬುಡ, ನಾವುಂದ, ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಕಡಿಕೆ ಕಂಬಳಗದ್ದೆ, ಕೆಂಬೈಲು, ಸಂಸಾಡಿ, ಅರೆಹೊಳೆ ಮುಂತಾದ ಪ್ರದೇಶಗಳು ಮುಳುಗಡೆ ಭೀತಿಯಲ್ಲಿದ್ದು, ಸ್ಥಳೀಯರು ಇದೀಗ ಜಾನುವಾರುಗಳನ್ನು ಸಾಗಿಸಲು ಹರಸಾಹಸಪಡುತ್ತಿದ್ದಾರೆ. ಈ ಪ್ರದೇಶದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗಳು ಕೃತಕ ನೆರೆಯಿಂದ ಸಂಪೂರ್ಣ ಜಲಾವೃತಗೊಂಡಿದೆ. ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿ ಬಿರುಸಿನ ಮಳೆ ಇರುವುದರಿಂದ ಗಾಳಿ ರಭಸಕ್ಕೆ ಮರಗಳು ಹಾಗೂ ಕರೆಂಟ್ ಕಂಬಗಳು ಅಲ್ಲಲ್ಲಿ ನೆಲಕ್ಕುರುಳಿವೆ.

ಬೈಂದೂರು ತಹಸೀಲ್ದಾರ್ ಕಿರಣ್ ಗೌರಯ್ಯ ಅವರು‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಎ ಹನುಮಂತ ರಾಯ್, ಪಿಡಿಒ ಪ್ರಕಾಶ್, ಬೈಂದೂರು ವಿಎ ಮಂಜುನಾಥ ಬಿಲ್ಲವ ಮೊದಲಾದವರು ಜೊತೆಗಿದ್ದರು.

ಮಳೆಯಿಂದಾಗಿ ನೆರೆ ನೀರು ಹೆಚ್ಚಿರುವಲ್ಲಿ ಜನರಿಗೆ ಅಗತ್ಯ ಮುನ್ಸೂಚನೆ ನೀಡಲಾಗಿದೆ. ಅನಿವಾರ್ಯತೆ ಬಿದ್ದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುತ್ತದೆ‌. ದೋಣಿ ಬೇಡಿಕೆ ಇರುವಲ್ಲಿ ಅದರ ವ್ಯವಸ್ಥೆಯನ್ನು ಮಾಡಲಾಗುತ್ತದೆ.‌ ಸೇಫ್ಟಿ ಜಾಕೇಟ್ ಬೇಡಿಕೆಯಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳ‌ ಗಮನಕ್ಕೆ ತರಲಾಗಿದೆ ಎಂದು ತಹಶೀಲ್ದಾರ್‌ ಕಿರಣ್‌ ಗೌರಯ್ಯ ಹೇಳಿದರು


Spread the love