ಧಾರಿಣಿ ಎಸ್ ಕುಂದಾಪುರ ಅವರಿಗೆ “ಗಾನಾಮೃತ-2021” ಕಿರೀಟ

Spread the love

ಧಾರಿಣಿ ಎಸ್ ಕುಂದಾಪುರ ಅವರಿಗೆ “ಗಾನಾಮೃತ-2021” ಕಿರೀಟ

ಕುಂದಾಪುರ: ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೊಸ ವೇದಿಕೆಯನ್ನು ಕಲ್ಪಿಸಿಕೊಟ್ಟ ದಿಗಂತ್ ಮ್ಯೂಸಿಕಲ್ ಸಂಸ್ಥೆಯ ಈ ವಿಶೇಷ ಪ್ರಯತ್ನ ಶ್ಲಾಘನೀಯ. ಹಳ್ಳಿಗಾಡಿನ ಪ್ರತಿಭೆಗಳು ಈ ವೇದಿಕೆಯ ಮೂಲಕ ರಾಜ್ಯ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಮಾಜಿ ತಾ.ಪಂ ಸದಸ್ಯ ಕಾಲ್ತೋಡು ವಿಜಯ್ ಶೆಟ್ಟಿ ಹೇಳಿದರು.

ಭಾನುವಾರ ಕಾಲ್ತೋಡು ಶ್ರೀ ಮಹಲಸಾ ಮಾರಿಕಾಂಬಾ ಸಭಾಭವನದಲ್ಲಿ ನಡೆದ ಸಂಗೀತ ಸ್ಪರ್ಧೆ ಗಾನಾಮೃತ-2021 ಪ್ರತಿಭೆಗೊಂದು ನೇರ ವೇದಿಕೆ ಗ್ಯಾಂಡ್ ಫಿನಾಲೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲ್ತೋಡು ಗ್ರಾ.ಪಂ ಸದಸ್ಯರಾದ ಬಿ. ಅಣ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲ್ತೋಡು ಗ್ರಾ.ಪಂ ಅಧ್ಯಕ್ಷೆ ಲಲಿತಾ ಶೆಟ್ಟಿ ಮೂರೂರು, ಉಪಾಧ್ಯಕ್ಷೆ ನೇತ್ರಾವತಿ ಆಚಾರ್ಯ, ಮಾರಿಕಾಂಬಾ ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಹಾಲಸಾ ಮಾರಿಕಾಂಬಾ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಯ್ಯ, ರಾಜಶೇಖರ್ ಮತ್ತು ದಿಗಂತ್ ಮ್ಯೂಸಿಕಲ್‍ನ ಸಂಸ್ಥಾಪಕ ಹಾಗೂ ಗಾಯಕ ಸುಚೇಂದ್ರ ಆಚಾರ್ಯ ಕಾಲ್ತೋಡು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಿಗಂತ್ ಮ್ಯೂಸಿಕಲ್‍ನ ಪ್ರತಿಭಾವಂತ ಗಾಯಕಿ ವಿಜಯಲಕ್ಷ್ಮೀ ಕುಲಾಲ್ ಮೆಟ್ಟಿನಹೊಳೆ ಅವರನ್ನು ಸನ್ಮಾನಿಸಲಾಯಿತು.

ಗಾನಾಮೃತದ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ವಿನುಷ್ ಭಾರದ್ವಾಜ್, ವರ್ಷಾ ಆಚಾರ್ಯ, ಗೀತಾ ಬೈಂದೂರು ಸಹಕರಿಸಿದರು. ಮಣಿಕಂಠ ಶೆಟ್ಟಿ ಸಲ್ವಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

ಗಾನಾಮೃತ-2021 ರ ವಿಜೇತರು:
ಗಾನಾಮೃತ-2021ರ ಪ್ರಥಮ ಸ್ಥಾನ ಪಡೆದುಕೊಂಡ ಧಾರಿಣಿ ಎಸ್ ಕುಂದಾಪುರ ಅವರಿಗೆ 9,999 ರೂ. ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನ ಪಡೆದುಕೊಂಡ ಪೂರ್ವಿ ಶೆಟ್ಟಿ ಮಣಿಪಾಲ ಅವರಿಗೆ 6,666 ರೂ. ನಗದು ಹಾಗೂ ಶಾಶ್ವತ ಫಲಕ, ತೃತೀಯ ಸ್ಥಾನ ಪಡೆದುಕೊಂಡ ಭಾರ್ಗವ ಆಚಾರ್ಯ ಬಸ್ರೂರು ಅವರಿಗೆ 3,333 ರೂ. ನಗದು ಹಾಗೂ ಶಾಶ್ವತ ಫಲಕವನ್ನು ಕೊಟ್ಟು ಅಭಿನಂದಿಸಲಾಯಿತು.


Spread the love