ಧಾರ್ಮಿಕ ಇಲಾಖೆಯಲ್ಲಿ ಪಾರದರ್ಶಕತೆ ತರಲು ‘ಇ- ಆಫೀಸ್‌’ ವ್ಯವಸ್ಥೆ- ಮುಖ್ಯಮಂತ್ರಿ ಯಡಿಯೂರಪ್ಪ

Spread the love

ಧಾರ್ಮಿಕ ಇಲಾಖೆಯಲ್ಲಿ ಪಾರದರ್ಶಕತೆ ತರಲು ‘ಇ- ಆಫೀಸ್‌’ ವ್ಯವಸ್ಥೆ- ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ‘ಧಾರ್ಮಿಕ ದತ್ತಿ ಇಲಾಖೆಯ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಕಡತಗಳು ತ್ವರಿತಗತಿಯಲ್ಲಿ ವಿಲೇವಾರಿಯಾಗಲು ಇ- ಆಫೀಸ್ ತಂತ್ರಾಂಶವನ್ನು ಇಂದಿನಿಂದ (ಗುರುವಾರ) ಜಾರಿಗೆ ತರಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ರಾಜ್ಯಮಟ್ಟದ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯರ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮತ್ತು ‘ಗುಡಿ’ ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಪ್ರಮುಖ ದೇವಸ್ಥಾನದಲ್ಲಿ ಆದ್ಯತೆ ಮೇಲೆ ಪೂಜೆ, ಪ್ರತ್ಯೇಕ ದರ್ಶನಕ್ಕೆ ಅವಕಾಶ ನೀಡಲಾಗಿದೆ’ ಎಂದರು,

‘ಅಂಗವಿಕಲರಿಗೆ, ವಯೋವೃದ್ದರಿಗೂ ಅವಕಾಶ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ವತಿಯಿಂದ ತಿರುಮಲ, ಮಂತ್ರಾಲಯ, ಶ್ರೀಶೈಲಂ ಮತ್ತು ವಾರಣಾಸಿಗೆ ತೆರಳುವ ಯಾತ್ರಿಗಳಿಗೆ ವಸತಿ ಸೌಕರ್ಯ ಮಾಡಲಾಗಿದೆ. ದೇವಸ್ಥಾನಗಳ ಪರಂಪರೆಯನ್ನು ಪರಿಚಯಿಸುವ ‘ಗುಡಿ’ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದೇನೆ’ ಎಂದರು.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಗೋ ಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ನಮ್ಮ ಭಾವನೆಗಳಿಗೆ ಯಡಿಯೂರಪ್ಪ ಸ್ಪಂದಿಸಿದ್ದಾರೆ.‌ ಮಹಾತ್ಮ ಗಾಂಧಿಯಿಂದ ಈ ನೆಲದ ರೈತರವರೆಗೂ ಎಲ್ಲರೂ ಗೋಹತ್ಯಾ ನಿಷೇಧ ಜಾರಿಯಾಗಬೇಕು ಎಂದು ಬಯಸಿದ್ದರು’ ಎಂದರು.

ಕೊರೊನಾ ಮಡಿವಂತಿಕೆಯ ಸಂದೇಶ ನೀಡಿದೆ: ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಪರಿಸರ ಹಾಗೂ ದೇವಸ್ಥಾನ ಶುದ್ಧವಾಗಿರಬೇಕು. ಅಂತರಂಗ -ಬಹಿರಂಗ ಶುದ್ದಿಯಾಗಿರಬೇಕು. ಅಂತರಂಗ ಶುದ್ದಿಗೆ ತಪ್ಪಸ್ಸು, ಧ್ಯಾನ ಬೇಕಾಗುತ್ತದೆ. ಕ್ಷೇತ್ರಕ್ಕೆ ಬಂದಾಗ ಬಹಿರಂಗ ಶುದ್ದಿಗೆ ಅವಕಾಶ ಬೇಕಾಗುತ್ತದೆ. ನಮ್ಮ ಕ್ಷೇತ್ರದ ಪರಿಸರವನ್ನು ವಿಶೇಷವಾಗಿ ಇಟ್ಟುಕೊಳ್ಳಬೇಕು. ಮೂಲ ಸಾನಿಧ್ಯವನ್ನು ರಕ್ಷಣೆ ಮಾಡಬೇಕು’ ಎಂದರು.

‘ನಮ್ಮ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು, ಅವರವರ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕು. ಕ್ಷೇತ್ರಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಅಭಯ ದಾನ ಮಾಡಬೇಕು ಎಂಬ ಸಂದೇಶ ಇದೆ. ನಾವು ಸದಾ ಎಚ್ಚರಿಕೆಯಿಂದ ಇರಬೇಕು. ನಿಮ್ಮ ನಿಮ್ಮ ದೇವಾಲಯಗಳಲ್ಲಿ ಕೆಲವು ಪದ್ದತಿಗಳು ಇರಬಹುದು. ಆ ಪದ್ದತಿಯನ್ನು ಕಾಪಾಡಬೇಕು. ತಿಳುವಳಿಗೆ ಇದ್ದು ತಪ್ಪು ಮಾಡಿದ್ರೆ ತಪ್ಪು ಅದು’ ಎಂದು ಅಭಿಪ್ರಾಯಪಟ್ಟರು.

‘ಭೀಕರ ಕಾಯಿಲೆಗಳು ರಾಜ್ಯಕ್ಕೆ ಬಂದಾಗ ಭಗವಂತನ ದೊಡ್ಡ ಅನುಗ್ರಹ ಕೊಡಬೇಕು. ಧಾರ್ಮಿಕ ಪ್ರಜ್ಞೆಯನ್ನು ಸಚಿವ ಶ್ರೀನಿವಾಸ್ ಪೂಜಾರಿಯವರು ಉಳಿಸುತ್ತಿದ್ದಾರೆ. ಹಳೆಯ ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ನಮಗೆ ರಾಜ್ಯ ಪ್ರಶಸ್ತಿ ಕೊಟ್ಟಿದ್ದಾರೆ’ ಎಂದರು.

‘ಅನೇಕ ದೇವಾಲಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಯಡಿಯೂರಪ್ಪನವರಿಂದ ಸಾಕಷ್ಟು ಅನುಕೂಲ ಆಗಿದೆ. ಕರ್ನಾಟಕದಲ್ಲಿ ಅನೇಕ ದೇವಾಲಯಗಳ ಜೀರ್ಣೋದ್ಧಾರಗೊಂಡಿವೆ. ನಮ್ಮ ದೇಶದಲ್ಲಿ ಧರ್ಮವನ್ನ ಬಿಟ್ಟರೆ ಬೇರೆ ಯಾವುದೇ ಶಕ್ತಿ ಇಲ್ಲ. ದೇವಾಲಯಗಳನ್ನು ನೋಡಲು ಬೇರೆ ಬೇರೆ ದೇಶದಿಂದ ಬರುತ್ತಾರೆ. ಇಲ್ಲಿನ ಧಾರ್ಮಿಕ ಶೈಲಿ ನೋಡಲು ವಿದೇಶಿಗರು ಬರುತ್ತಾರೆ. ಧರ್ಮದ ಆಸಕ್ತಿ, ಕುತೂಹಲ ಹೇಗೆ ಇರಬೇಕು ಎನ್ನುವುದು ಇಲ್ಲಿ ಕಂಡುಬರುತ್ತದೆ’ ಎಂದರು.

‘ಧಾರ್ಮಿಕ ನೆಲೆಯುಳ್ಳ ದೇವಾಲಯಗಳಿವೆ. ಪ್ರಸಿದ್ಧ ದೇವಾಲಯಗಳೂ ನಮ್ಮಲ್ಲಿ ಇವರ. ಯಡಿಯೂರಪ್ಪ ಅವರಿಗೆ ಧಾರ್ಮಿಕ ಶ್ರದ್ದೆ ಇದೆ. ನಮ್ಮ ಎಲ್ಲಾ ಶಾಸಕರು ದೇವಸ್ಥಾನಕ್ಕೆ ಅನುದಾನ ಕೊಡಿ ಎಂದು ಅಪೇಕ್ಷೆ ಪಡುತ್ತಾರೆ. ದೇವಾಲಯಗಳು ಸಮಾಜವನ್ನು ಒಗ್ಗೂಡಿಸುತ್ತವೆ.. ದೇವಾಲಯ ಎಲ್ಲಾ ಚಟುವಟಿಕೆಯ ಕೇಂದ್ರಗಳಾಗಿದೆ. ದೇವಸ್ಥಾನಗಳನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಹಾಗೂ ನಮ್ಮೆಲ್ಲರ ಕರ್ತವ್ಯವೂ ಆಗಿದೆ’ ಎಂದೂ ಹೇಳಿದರು.

‘ಕೊರೊನಾ ಏನಾದರೂ ಸಂದೇಶ ಕೊಟ್ಟಿದೆ ಅಂದರೆ, ಅದು ನಾವು ಮಡಿವಂತಿಕೆಯನ್ನು ಪಾಲಿಸಬೇಕು ಎನ್ನುವುದು. ನಮ್ಮ ಪಾವಿತ್ರ್ಯತೆಯನ್ನು, ದೇವಾಲಯವನ್ನು ಶುದ್ದವಾಗಿ ಇಟ್ಟುಕೊಳ್ಳುವುದು ಬಹಳ ಅಗತ್ಯ. ದೇವಾಲಯದ ಪರಿಸ್ಥಿತಿಯನ್ನು ಶುದ್ದಿಯಾಗಿಟ್ಟುಕೊಳ್ಳಬೇಕು’ ಎಂದೂ ಹೇಳಿದರು.

ರಾಜಾಶ್ರಯ ಇದ್ದರೆ ಮಾತ್ರ ಧರ್ಮ ಉಳಿಯಲು ಸಾಧ್ಯ: ಆರ್ಟ್‌ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ, ‘ನಾವು ಧರ್ಮ ರಕ್ಷಣೆ ಮಾಡಲೇಬೇಕು. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಸೇವೆ ಮಾಡಬೇಕು. ಧಾರ್ಮಿಕ ಕೇಂದ್ರಗಳು ಸಾಂಸ್ಕೃತಿಕ ಕೇಂದ್ರಗಳೂ ಆಗಿವೆ. ದೇವಸ್ಥಾನವು ಮಾನಸಿಕ ನೆಮ್ಮದಿ ನೀಡುವ ಕೇಂದ್ರಗಳಾಗಬೇಕಿದೆ. ದೇವಾಲಯದ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವುದು ಒಳ್ಳೆಯ ಕಾರ್ಯ’ ಎಂದರು.

‘ದೇವಸ್ಥಾನಗಳ ಅರ್ಚಕರು ಸ್ವಚ್ಛವಾಗಿ ಇರಬೇಕು. ದೇವಾಲಯದ ಸ್ವಚ್ಚತಾ ಕಾರ್ಯಕ್ಕೆ ಒತ್ತು ಕೊಡಬೇಕು. ದೇವರಿಗೆ ಹಾಕುವ ಹೂವುಗಳನ್ನು ಗೊಬ್ಬರಕ್ಕೆ ಬಳಕೆ ಮಾಡುವಂತಾಗಬೇಕು. ಕನ್ನಡದಲ್ಲಿ ಪೂಜೆ ನಡೆಯುವ ಪ್ರಕ್ರಿಯೆ ಒಳ್ಳೆಯದು. ರಾಜ್ಯದ ಹಲವು ದೇವಾಲಯಗಳಲ್ಲಿ ಕನ್ನಡದಲ್ಲಿ ಪೂಜೆ ಮಾಡುತ್ತೇವೆ. ಭರವಸೆಯಿಂದಲೇ ಪೂಜೆಗೆ ಅರ್ಥ ಬರುವುದು’ ಎಂದರು.

‘ವಿರೇಂದ್ರ ಹೆಗ್ಗಡೆ ಅವರು ದೇವಾಲಯಗಳು ಹೇಗಿರಬೇಕು ಎನ್ನುವುದನ್ನು ಮಾತಿನಿಂದ ಅಲ್ಲ, ಕೃತಿಯಿಂದ ಮಾಡಿ ತೋರಿಸಿದ್ದಾರೆ. 35 ಸಾವಿರ ದೇವಾಲಯ ಯಾವ ರೀತಿ ಕ್ರಿಯೆ ಮಾಡಬೇಕು ಅಂತ ತಿಳಿಸಿದ್ದಾರೆ. ವಿಧಾನಸೌಧದ ಮುಂಭಾಗದಲ್ಲೇ ಧರ್ಮೋ ರಕ್ಷೋ ರಕ್ಷಿತಃ ಎಂದು ಹಾಕಿದ್ದಾರೆ. ದೇವಾಲಯ ಶಾಶ್ವತವಾಗಿರಬೇಕು’ ಎಂದರು.

‘ದೇವಾಲಯ ಚೆನ್ನಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನು ಉತ್ತಮವಾಗಿ ನಡೆಸಿಕೊಂಡು ಹೋದರೆ ಯಶಸ್ಸು ಸಿಗಲಿದೆ. ಒಂದು ಪ್ರಾಚೀನ ದೇವಾಲಯ ಮರೆತುಬಿಡುತ್ತೇವೆ. ನಾವು ಜನರಿಗೆ ಹೆಚ್ಚು ಉತ್ತೇಜನ ನೀಡಬೇಕು. ಆಗ ಮಾತ್ರ ದೇವಸ್ಥಾನ ರಕ್ಷಿಸಲು ಸದಾವಕಾಶ ಸಿಗಲಿದೆ. ದೇವಸ್ಥಾನಗಳಲ್ಲಿ ಬೇಗ ಬೇಗ ಹೋಗಿ, ಬೇಗ ಬೇಗ ಕಳಿಸುವ ಪದ್ಧತಿ ಇದೆ. ಆದರೆ ಬಂದ ಭಕ್ತರನ್ನು ಒಂದಷ್ಟು ಗಳಿಗೆ ಕುಳಿತುಕೊಳ್ಳಲು ಬಿಡಬೇಕು. ದೇವಸ್ಥಾನ ತಪೋ ಭೂಮಿಯಾಗಿರಬೇಕು. ಸಿಬ್ಬಂದಿಗಳಿಗೆ ಹಾಗೂ ಪುರೋಹಿತರಿಗೆ ಪ್ರಶಿಕ್ಷಣ ನೀಡಬೇಕು’ ಎಂದರು.

‘ಕೊರೊನಾ ಬಂದ ಬಳಿಕ ಮಾನಸಿಕ ರೋಗ ಹೆಚ್ಚಾಗಿದೆ. ದೇವಾಲಯಗಳು ಮಾನಸಿಕ ರೋಗವನ್ನು ತಡೆಯುವಂಥ ಕಾರ್ಯವನ್ನು ಮಾಡುತ್ತಿವೆ. ಯೋಗ, ಧ್ಯಾನ ಬಹಳ ಮುಖ್ಯ. ರಾಜಾಶ್ರಯ ಇದ್ದರೆ ಮಾತ್ರ ಧರ್ಮ ಉಳಿಯಲು ಸಾಧ್ಯ. ಇಲ್ಲದೆ ಇದ್ದರೆ ಧರ್ಮ ಉಳಿಯಲು ಸಾಧ್ಯವಿಲ್ಲ. ನಮ್ಮ ಧರ್ಮವನ್ನ ಬಿಟ್ಟು ಬೇರೆ ಧರ್ಮಕ್ಕೆ ಯಾಕೆ ಹೋಗುತ್ತಾರೆಂದರೆ ಅಲ್ಲಿ ಆಕರ್ಷಣೆ ಇರುತ್ತದೆ. ನಮ್ಮ ಶಾಸ್ತ್ರದಲ್ಲಿ ಇರುವ ನುಡಿಗಳನ್ನು ಎಲ್ಲ ದೇವಸ್ಥಾನದಲ್ಲಿ ಹಾಕಬೇಕು. ತಮಿಳುನಾಡಿನಲ್ಲಿ ನುಡಿಮುತ್ತುಗಳನ್ನು ಹಾಕಿದ್ದಾರೆ. ದೇವಸ್ಥಾನದಲ್ಲಿ ಇಂಥ ನುಡಿಮುತ್ತುಗಳನ್ನು ಹಾಕುವುದರಿಂದ ಭಕ್ತರಲ್ಲಿ ಒಂದು ರೀತಿಯ ಚೈತನ್ಯ ತುಂಬಿದಂತಾಗುತ್ತದೆ. ಸರಳವಾದ ಭಾಷೆಯಲ್ಲಿ ಮಂತ್ರಗಳನ್ನು ಹೇಳುವುದು ಬಹಳ ಅವಶ್ಯಕ’ ಎಂದೂ ಅವರು ಅಭಿಪ್ರಾಯಪಟ್ಟರು


Spread the love