ನಕಲಿ ಕೋವಿಡ್ ರಿಪೋರ್ಟ್ ನೀಡುತ್ತಿದ್ದವನು ಅರೆಸ್ಟ್

Spread the love

ನಕಲಿ ಕೋವಿಡ್ ರಿಪೋರ್ಟ್ ನೀಡುತ್ತಿದ್ದವನು ಅರೆಸ್ಟ್

ಚಾಮರಾಜನಗರ: ತಮಿಳುನಾಡು ಮತ್ತು ಕೇರಳದೊಂದಿಗೆ ಗಡಿಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಕೊರೊನಾ ಮೂರನೇ ಅಲೆಯ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಕೋವಿಡ್ ನೆಗೆಟಿವ್ ದಾಖಲೆ ಇದ್ದರೆ ಮಾತ್ರ ಗಡಿದಾಟಿ ಹೋಗಲು ಸಾಧ್ಯವಿದೆ.

ಆದರೆ ಕೋವಿಡ್ ವರದಿಯನ್ನು ನಕಲಿ ಮಾಡಿಕೊಡುವ ಜಾಲ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ ಎಂದರೆ ಅಚ್ಚರಿಯಾಗಬಹುದು. ಇದೀಗ ಆ ಜಾಲದ ಕಿಂಗ್ ಪಿನ್ ಸಿಕ್ಕಿಬಿದ್ದಿದ್ದಾನೆ. ಅವನ ಹೆಸರು ಅನಿಲ್ ಕುಮಾರ್(35). ಈತ ಗುಂಡ್ಲುಪೇಟೆ ತಾಲೂಕಿನ ಹಂಗಳಪುರ ಗ್ರಾಮದ ನಿವಾಸಿಯಾಗಿದ್ದಾನೆ.

ಹಂಗಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮೊಬೈಲ್ ಸರ್ವೀಸ್ ನಲ್ಲಿ ಕುಳಿತೇ ಈತ ತಮಿಳುನಾಡಿಗೆ ಹೋಗಿ ಬರುವವರಿಗೆ ನಕಲಿ ಆರ್ ಟಿ ಪಿಸಿಆರ್ ವರದಿಯನ್ನು ಸಿದ್ಧಪಡಿಸಿ ಕೊಡುತ್ತಿದ್ದನು. ಲಾರಿ ಚಾಲಕರು ಸೇರಿದಂತೆ ತಮಿಳುನಾಡಿಗೆ ಹೋಗುವವರು ಮತ್ತು ಬರುವವರು ಪ್ರತಿ ಸಲವೂ ಕೋವಿಡ್ ನೆಗೆಟಿವ್ ವರದಿ ಬೇಕಾಗುತ್ತದೆ. ಇಂತಹವರಿಗೆ ಅನಿಲ್ ಕುಮಾರ್ ಕೋವಿಡ್ ನೆಗೆಟಿವ್ ನ ನಕಲಿ ವರದಿಯನ್ನು ನೀಡುತ್ತಿದ್ದನು ಎನ್ನಲಾಗಿದೆ.

ಈ ದಂಧೆ ಅದೆಷ್ಟು ದಿನಗಳಿಂದ ನಡೆಯುತ್ತಿತ್ತೋ ಗೊತ್ತಿಲ್ಲ ಆದರೆ ಅಕ್ರಮ ಹೆಚ್ಚು ದಿನ ಉಳಿಯಲ್ಲ ಎಂಬಂತೆ ತಮಿಳುನಾಡು ಗಡಿಯಲ್ಲಿ ಪರಿಶೀಲನೆ ನಡೆಸಿದ ವೇಳೆ ಚಾಮರಾಜನಗರದಿಂದ ಬಂದಿದ್ದವರ ಬಳಿ ನಕಲಿ ಕೋವಿಡ್ ರಿಪೋರ್ಟ್ ಪತ್ತೆಯಾಗಿತ್ತು. ಅವರನ್ನು ವಿಚಾರಣೆಗೊಳಪಡಿಸಿದಾಗ ಅವರು ಗುಂಡ್ಲುಪೇಟೆಯ ಅನಿಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದ್ದರು. ಹೀಗಾಗಿ ತಮಿಳುನಾಡು ಪೊಲೀಸರು ಗಂಡ್ಲುಪೇಟೆ ಪೊಲೀಸ್ ಠಾಣೆಗೆ ಸಂದೇಶ ರವಾನಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಅಪರಾಧ ಸಬ್ ಇನ್ಸ್ ಪೆಕ್ಟರ್ ಸುಜಾತ ಮತ್ತು ಸಿಬ್ಬಂದಿ ಶ್ರೀ ವೀರಭದ್ರೇಶ್ವರ ಮೊಬೈಲ್ ಸರ್ವೀಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಚಾಮರಾಜನಗರದಿಂದ ಹೊರ ರಾಜ್ಯಕ್ಕೆ ಹೋಗುವವರಿಗೆ ಮತ್ತು ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ, ಲಾರಿ ಚಾಲಕರಿಗೆ ಅನಿಲ್ ಕುಮಾರ್ ಕಂಪ್ಯೂಟರ್‌ ಸೆಂಟರ್‌ನಲ್ಲಿ ನಕಲಿ ಕೋವಿಡ್ ರಿಪೋರ್ಟ್ ಪ್ರಮಾಣ ಪತ್ರ ತಯಾರಿಸಿ ನೀಡುತ್ತಿದ್ದದ್ದು ಪತ್ತೆಯಾಗಿದೆ.

ಅನಿಲ್ ಕುಮಾರ್ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ. ಈ ಹಿಂದೆ ಕೊಡಗಿನಲ್ಲಿಯೂ ಕೂಡ ಇದೇ ರೀತಿ ಕೇರಳಕ್ಕೆ ತೆರಳುವವರಿಗೆ ನಕಲಿ ಕೋವಿಡ್ ರಿಪೋರ್ಟ್ ಮಾಡಿಕೊಡುತ್ತಿದ್ದ ಸಿದ್ದಾಪುರದ ವ್ಯಕ್ತಿಯನ್ನು ಬಂಧಿಸಿದನ್ನು ಸ್ಮರಿಸಬಹುದಾಗಿದೆ.


Spread the love