ನಗರದಲ್ಲಿ ಕೇರಳ ಉದ್ಯಮಿಯನ್ನು ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು

Spread the love

ನಗರದಲ್ಲಿ ಕೇರಳ ಉದ್ಯಮಿಯನ್ನು ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು

ಮಂಗಳೂರು: ನಗರದಲ್ಲಿ ಫಾರ್ಮಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕೇರಳ ಮೂಲದ ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಹಾಡುಹಗಲೇ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಕಾವೂರಿನಲ್ಲಿ ಮಂಗಳವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಎಂದು ಗುರುತಿಸಲಾಗಿದೆ.

ಮೂಲತಃ ಕೇರಳದವರಾಗಿರುವ ಸುರೇಂದ್ರನ್ ಅವರು ಕಳೆದ ಹಲವು ವರ್ಷಗಳಿಂದ ನಗರದ ಕಾವೂರು ಮಲ್ಲಿ ಲೇಔಟ್ನಲ್ಲೇ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದು ಫಾರ್ಮ್ ಉದ್ಯಮ ನಡೆಸುತ್ತಿದ್ದರು. ಮಂಗಳವಾರ ಪತ್ನಿ ಫಾರ್ಮ್ ಉದ್ಯಮ ನೋಡಿಕೊಳ್ಳಲು ಹೋಗಿದ್ದು ಮಧ್ಯಾಹ್ನದ ವೇಳೆ ಮನೆಯಲ್ಲಿದ್ದ ಸುರೇಂದ್ರನ್ ಅವರನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸುರೇಂದ್ರನ್ ಅವರ ಪತ್ನಿ ಸಂಜೆ ವೇಳೆ ಮನೆಗೆ ಬಂದಾಗ ಮನೆ ಸುತ್ತ ಜನ ಸೇರಿದ್ದರು. ಪತಿ ಕೊಲೆಯಾದ ವಿಷಯ ಅವರಿಗೆ ತಿಳಿದಿರಲಿಲ್ಲ. ಸುರೇಂದ್ರನ್ ಕೊಲೆಗೆ ಸ್ಪಷ್ಟ ಕಾರಣವೇನೆಂದು ತಿಳಿದು ಬಂದಿಲ್ಲ.

ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love