ನಗರಪಾಲಿಕೆ ವ್ಯಾಪ್ತಿಯಲ್ಲಿ ಶುದ್ಧೀಕರಿಸಿದ ನೀರು ಸರಬರಾಜು
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ನೀರು ಶುದ್ಧೀಕರಣ ಘಟಕಗಳಲ್ಲಿ ಶುದ್ಧೀಕರಿಸಿ ನಂತರ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಮನೆಗಳಿಗೆ ನೀರು ಸರಬರಾಜನ್ನು ಮಾಡಲಾಗುತ್ತಿದೆ. ಮುಂದುವರೆದು ಎಲ್ಲಾ ವಾರ್ಡುಗಳಲ್ಲಿ ಕಾಲಕಾಲಕ್ಕೆ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ಶುದ್ಧೀಕರಿಸಿದ ನೀರಿನ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ.
ಮಂಗಳೂರು ಮಹಾನಗರಪಾಲಿಕೆಯ ವಾರ್ಡು ನಂ. 31 ರ ನೋಡು ಲೇನ್ ಭಟ್ಟಗುಡ್ಡೆ 5ನೇ ಅಡ್ಡ ರಸ್ತೆ ಪ್ರದೇಶದ ಕೆಲವು ಮನೆಗಳಲ್ಲಿ ಕಲುಷಿತ ನೀರು ಬರುತ್ತಿರುವ ಬಗ್ಗೆ ಪಾಲಿಕೆಗೆ ದೂರುಗಳು ಬಂದಿರುತ್ತವೆ. ಅದರಂತೆ ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳು ಪ್ರದೇಶವನ್ನು ಪರಿಶೀಲಿಸಲಾಗಿ ನೀರು ಸರಬರಾಜು ಕೊಳವೆಯಲ್ಲಿ ಉಂಟಾಗಿದ್ದ ಸೋರಿಕೆಯನ್ನು ಪತ್ತೆ ಹಚ್ಚಿ ಕೂಡಲೇ ಅದನ್ನು ದುರಸ್ತಿಪಡಿಸಲಾಗಿರುತ್ತದೆ. ಹಾಗೂ ಶುದ್ಧ ಕುಡಿಯುವ ನೀರನ್ನು ಎಲ್ಲಾ ರೀತಿಯ ಪರೀಕ್ಷೆಗಳನ್ನು ಕೈಗೊಂಡು ದೃಢೀಕರಿಸಿದ ನಂತರವೇ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಪಾಲಿಕೆಯು ಶುದ್ಧೀಕರಿಸಿದ ನೀರನ್ನು ಎಲ್ಲಾ ವಾರ್ಡುಗಳಿಗೆ ಸರಬರಾಜು ಮಾಡಲಾಗುತ್ತಿದ್ದು ಸಾರ್ವಜನಿಕರಿಗೆ ನೀರು ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳು ಉಂಟಾದರೆ ಪಾಲಿಕೆಯ ಸಹಾಯವಾಣಿ ಸಂಖ್ಯೆ: 0824- 2220303 ಯನ್ನು ಸಂಪರ್ಕಿಸಬಹುದು ಎಂದು ನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
