ನಗರಸಭೆ ಸಾಮಾನ್ಯ ಸಭೆ: ಮಲ್ಪೆ ಬೀಚ್‌ನ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ

Spread the love

ನಗರಸಭೆ ಸಾಮಾನ್ಯ ಸಭೆ: ಮಲ್ಪೆ ಬೀಚ್‌ನ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ

ಉಡುಪಿ: ಪ್ರಮುಖ ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್ ಮತ್ತು ಸೈಂಟ್ ಮೇರಿಸ್ ದ್ವೀಪದಲ್ಲಿ ಸಾಕಷ್ಟು ಸಾವುನೋವುಗಳು ಸಂಭವಿಸುತ್ತಿವೆ. ಆದರೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಮಲ್ಪೆ ಬೀಚ್‌ನ ಗುತ್ತಿಗೆದಾರ ರನ್ನು ಕಪ್ಪು ಪಟ್ಟಿಗೆ ಸೇರಿಸಿ ಮರುಟೆಂಡರ್ ಕರೆಯಬೇಕು ಎಂದು ಉಡುಪಿ ನಗರಸಭೆ ಸದಸ್ಯರು ಒತ್ತಾಯಿಸಿದರು.

ಮಂಗಳವಾರ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್ ಮಲ್ಪೆೆ ಬೀಚ್‌ ಹಾಗೂ ಸೇಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಈಚೆಗೆ ಪ್ರವಾಸಿಗರ ಜತೆ ಅಲ್ಲಿನ ಸಿಬ್ಬಂದಿ ನಡೆದುಕೊಂಡ ರೀತಿ ಸಾರ್ವಜನಿಕ ಟೀಕೆಗಳಿಗೆ ಗುರಿಯಾಗಿದೆ. ಪ್ರವಾಸಿಗರಿಂದ ಕ್ಯಾಮೆರಾ ದರ, ಪಾರ್ಕಿಂಗ್ ದರ ವಸೂಲಿ ಮಾಡುತ್ತಿರುವ ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದರು.

ಆಡಳಿತ ಪಕ್ಷದ ಸದಸ್ಯ ಯೋಗೀಶ್ ಸಾಲ್ಯಾನ್ ಮಾತನಾಡಿ, ಮಲ್ಪೆ ಬೀಚ್ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುದಾಗಿ ಪ್ರವಾಸೋದ್ಯಮ ಇಲಾಖೆ 2018ರಲ್ಲಿ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಮತ್ತೆ ಅವರಿಗೆ ಟೆಂಡರ್ ನೀಡಲಾಗಿದೆ. ನೀರಿಗೆ ಬಿದ್ದು ಸತ್ತವರ ಬಗ್ಗೆ ಇವರು ಕೇವಲವಾಗಿ ಮಾತನಾಡುತ್ತಾರೆ. ಇವರ ಟೆಂಡರ್ ರದ್ದುಗೊಳಿಸಿ, ಕಪ್ಪು ಪಟ್ಟಿಗೆ ಸೇರಿಸುವ ನಿರ್ಣಯ ಮಾಡಬೇಕು. ಮರು ಟೆಂಡರ್ ಕರೆಯುವ ಮೊದಲು 35ವಾರ್ಡ್ ಗಳ ಸದಸ್ಯರ ಸಭೆ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ರಘುಪತಿ ಭಟ್, ಸೈಂಟ್ ಮೇರಿಸ್‌ನಲ್ಲಿನ ಕ್ಯಾಮೆರಾ ಶುಲ್ಕವನ್ನು ರದ್ದುಗೊಳಿಸಿದ್ದೇವೆ. ಎರಡೆರಡು ಕಡೆ ಪಾರ್ಕಿಂಗ್ ಶುಲ್ಕ ಸೇರಿದಂತೆ ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಒಂದೇ ಕಡೆ ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳಲು ನಿಯಮ ರೂಪಿಸಲಾಗುವುದು ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು. ಆ ಹಿನ್ನೆಲೆಯಲ್ಲಿ ಆ ಟೆಂಡರ್ ರದ್ದು ಗೊಳಿಸಿ ಮರು ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ನಗರದ ಹಲವೆಡೆ ಸ್ಮಾರ್ಟ್‌ ಟ್ರಾಫಿಕ್‌ ಸಿಗ್ನಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ನಿರಂತರ ಅಪಘಾತಗಳು ನಡೆಯುತ್ತಿವೆ ಎಂದು ಸದಸ್ಯೆೆ ಅಮೃತಾ ಕೃಷ್ಣಮೂರ್ತಿ ದೂರಿದರು.

ನಗರ ವ್ಯಾಪ್ತಿಯಲ್ಲಿರುವ ಹಳೆಯ ಹಾಗೂ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಯವಂತೆ ದೂರು ನೀಡಿದರೂ ಮೆಸ್ಕಾಂ ಸಿಬ್ಬಂದಿ ಸ್ಪಂದನೆ ಸಿಗುತ್ತಿಲ್ಲ ಎಂದು ಸದಸ್ಯೆ ಜಯಂತಿ ಅಸಮಾಧಾನ ವ್ಯಕ್ತಪಡಿಸಿದರು.

ದೂರಗಳಿಗೆ ಸಂಬಂಧಿಸಿದಂತೆ 1912ಗೆ ಕರೆಮಾಡಿದರೆ ತಕ್ಷಣ ಸ್ಪಂದನ ಸಿಗಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.

ನಗರದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದಾಗಿ ಕಲ್ಮಾಡಿ ಹೊಳೆ ಸಂಪೂರ್ಣ ಕಲುಷಿತಗೊಂಡಿದೆ. ಜಲಚರಗಳ ಹಾಗೂ ಜನರ ಜೀವಕ್ಕೆ ಕುತ್ತು ಎದುರಾಗಿದೆ. ನಗರದ ಹೊಲಸೆಲ್ಲ ಹೊಳೆ ಸೇರುತ್ತಿದ್ದು ತಕ್ಷಣ ಪರಿಹಾರ ಕಲ್ಪಿಸಬೇಕು. ನಿಟ್ಟೂರು ಶುದ್ಧೀಕರಣ ಘಟಕ ಸರಿಪಡಿಸಬೇಕು ಎಂದು ಸದಸ್ಯ ಮನೋಹರ್ ಕಲ್ಮಾಡಿ ಒತ್ತಾಯಿಸಿದರು.

ಸದಸ್ಯ ವಿಜಯ ಕೊಡವೂರು ಕೂಡ ಧನಿಗೂಡಿಸಿ, ಯುಜಿಡಿ ಅವ್ಯವಸ್ಥೆೆಯಿಂದ ಕೊಡವೂರು, ಕಲ್ಮಾಡಿ ಭಾಗದಲ್ಲಿ ಸಾಂಕ್ರಮಿಕ ರೋಗಭೀತಿ ಎದುರಾಗಿದೆ. ದುರ್ವಾಸನೆಯಿಂದ ಜನರು ವಾಸಮಾಡುವುದು ಕಷ್ಟವಾಗಿದೆ ಎಂದರು.

ಹೊಸ ಯುಜಿಡಿ ಕಾಮಗಾರಿಗೆ ₹ 330 ಕೋಟಿ ಅನುದಾನ ಸರ್ಕಾರದಿಂದ ದೊರೆಯಬೇಕಿದ್ದು, ಸಿಕ್ಕರೆ ಎಸ್‌ಟಿಪಿ ಘಟಕ ಮೇಲ್ದರ್ಜೆಗೇರಿಸಲಾಗುತ್ತದೆ. ಸಧ್ಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ತಿಳಿಸಿದರು.

ಬೀದಿ ದೀಪಗಳ ಸಮಸ್ಯೆಯ ವಿಷಯ ಪ್ರಸ್ತಾಪಿಸಿದ ಶಾಸಕ ಕೆ.ರಘುಪತಿ ಭಟ್‌, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಂಪೂರ್ಣ ಎಲ್‌ಇಡಿ ಬೀದಿದೀಪಗಳ ಅಳವಡಿಕೆ ಯೋಜನೆಗೆ ಸರ್ಕರದ ಮಟ್ಟದಲ್ಲಿ ಹಿನ್ನಡೆಯಾಗಿದೆ.

ನಗರಸಭೆಯ ಅನುದಾನದಿಂದಲೇ ಎಲ್‌ಇಡಿ ಬೀದಿದೀಪಗಳ ಅಳವಡಿಕೆಗೆ ಯೋಜನೆ ಕಾರ್ಯರೂಪಕ್ಕೆ ಬರಬೇಕು. ಸದ್ಯ ತುರ್ತಾಗಿ ಅಳವಡಿಸುವ 3 ಸಾವಿರ ಎಲ್‌ಇಡಿ ಲೈಟ್ ಖರೀದಿಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದರು.

ಶಾಸಕರ ಪ್ರಸ್ತಾವಕ್ಕೆ ಸಭೆಯಲ್ಲಿ ಅನುಮೋದನೆ ದೊರೆಯಿತು. ಎಲ್‌ಇಡಿ ಬೀದಿದೀಪಗಳ ಅಳವಡಿಕೆ ಯೋಜನೆಯ ಕುರಿತು ವರದಿ ನೀಡುವಂತೆ ಅಧ್ಯಕ್ಷೆೆ ಸುಮಿತ್ರಾ ನಾಯಕ್ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಉದಯ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಕೊಳ ಇದ್ದರು.


Spread the love