ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಸಪ್ಲೈಯರ್ ಮೇಲೆ ಹಲ್ಲೆ: ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ, ಗೃಹ ಸಚಿವರಿಗೆ ದೂರು, ತನಿಖೆಗೆ ಸೂಚನೆ

Spread the love

ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಸಪ್ಲೈಯರ್ ಮೇಲೆ ಹಲ್ಲೆ: ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ, ಗೃಹ ಸಚಿವರಿಗೆ ದೂರು, ತನಿಖೆಗೆ ಸೂಚನೆ

ಬೆಂಗಳೂರು: ಬ್ಯಾಂಕಿನಿಂದ ಸಾಲ ಕೊಡಿಸುವ ವಿಚಾರದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ 25 ಕೋಟಿ ರೂಪಾಯಿ ವಂಚನೆ ಮಾಡಲು ಯತ್ನಿಸಿದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಪ್ರಕರಣದ ಪ್ರಮುಖ ಆರೋಪಿ ಅರುಣ ಕುಮಾರಿ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದರು.

ಇದೀಗ ಅಖಾಡಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಎಂಟ್ರಿಯಾಗಿದೆ. ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಟ ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ದೂರು ನೀಡಿದ್ದಾರೆ. ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಮಹಿಳೆ ಅರುಣಾ ಕುಮಾರಿ ಪರವಾಗಿ ಪರೋಕ್ಷವಾಗಿ ನಿಂತಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ದೂರು ನೀಡಿ ಹೊರಗೆ ಬಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ದರ್ಶನ್ ಮತ್ತು ಅವರ ಮೈಸೂರಿನ ಸ್ನೇಹಿತರಾದ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೆಲಂಟ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸಂದೇಶ್ ನಾಗರಾಜ್ ಅವರಿಗೆ ಸೇರಿದ ಹೊಟೇಲ್ ನಲ್ಲಿ ಇತ್ತೀಚೆಗೆ ಇದೇ ಸ್ಟಾರ್ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಹೋಗಿ ಊಟ ಪಾರ್ಟಿ ಮಾಡಿ ಪಾಪದ ದಲಿತ ಸಪ್ಲೈಯರ್ ಗೆ ಹೊಡೆದಿದ್ದಾರೆ. ಇದರಿಂದ ಅವನ ಕಣ್ಣು ಮಂಜಾಗಿ ಹೋಗಿದೆ, ನಂತರ ಹೋಗಿ ಪೊಲೀಸ್ ಸ್ಟೇಷನ್ ನಲ್ಲಿ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ, ಸಾಕ್ಷಿಗಳನ್ನಿಟ್ಟುಕೊಂಡೇ ಇಂದು ಗೃಹ ಸಚಿವರಿಗೆ ದೂರು ನೀಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇನೆ ಎಂದರು.

ಮೈಸೂರಿನಲ್ಲಿ ಸಂದೇಶ್ ಪ್ರಿನ್ಸ್ ನಾಗರಾಜ್ ಹೊಟೇಲ್ ನಲ್ಲಿ ನಟ ದರ್ಶನ್ ಮತ್ತು ಅವರ ಸ್ನೇಹಿತರು ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮೈಸೂರು ಪೊಲೀಸರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಆದೇಶ ಹೊರಡಿಸಿದ್ದಾರೆ. ದರ್ಶನ್ ಮತ್ತು ಗ್ಯಾಂಗ್ ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದಾಗ ನಿರ್ಮಾಪಕ ಮತ್ತು ಉದ್ಯಮಿ ಸಂದೇಶ್ ನಾಗರಾಜ್ ನನಗೆ ಟಿವಿ ನೋಡಿದ ಮೇಲೆಯೇ ಗೊತ್ತಾಗಿದ್ದು, ಹಲ್ಲೆ ನಡೆದ ಪ್ರಕರಣ ನನ್ನ ಗಮನಕ್ಕೆ ಬಂದೇ ಇಲ್ಲ, ನನಗೆ ಯಾರು ದೂರು ನೀಡಲೂ ಇಲ್ಲ ಎಂದಿದ್ದಾರೆ.


Spread the love