ನದಿಗೆ ಉರುಳಿ ಬಿದ್ದ ಆಟೊ ರಿಕ್ಷಾ: ಮಹಿಳೆ ಮೃತ್ಯು, ಇಬ್ಬರಿಗೆ ಗಾಯ

Spread the love

ನದಿಗೆ ಉರುಳಿ ಬಿದ್ದ ಆಟೊ ರಿಕ್ಷಾ: ಮಹಿಳೆ ಮೃತ್ಯು, ಇಬ್ಬರಿಗೆ ಗಾಯ
 
ಬೆಳ್ತಂಗಡಿ: ಆಟೊ ರಿಕ್ಷಾವೊಂದು ಮೃತ್ಯುಂಜಯ ನದಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಮುಂಡಾಜೆ ಕಾಪು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ಕಕ್ಕಿಂಜೆ ಕತ್ತರಿ ಗುಡ್ಡೆ ನಿವಾಸಿ ಸಫಿಯಾ(57) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ರಾತ್ರಿ 11 ಗಂಟೆಗೆ ಮುಂಡಾಜೆಯಿಂದ ಕಕ್ಕಿಂಜೆ ಕಡೆಗೆ ಹೋಗುತ್ತಿದ್ದ ರಿಕ್ಷಾ, ಕಾಪು ಚಡಾವು ಹತ್ತಿರ ಚಾಲಕನ ನಿಯಂತ್ರಣ ಕಳೆದು ಕೊಂಡು ಮೃತ್ಯುಂಜಯ ನದಿಗೆ ಉರುಳಿ ಬಿದ್ದಿದೆ. ಕಿಂಡಿಅಣೆಕಟ್ಟುಗಳಲ್ಲಿ ನೀರು ನಿಂತಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು ಎನ್ನಲಾಗಿದೆ. ರಿಕ್ಷಾದಲ್ಲಿದ್ದ ಸಫಿಯಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಈ ವೇಳೆಗೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ರಿಕ್ಷಾದಲ್ಲಿದ್ದ ಇತರರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯ ಬಗ್ಗೆ ಧರ್ಮಸ್ಥಳದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Spread the love