ನನಗೆ ಗುದ್ದಲಿ ಪೂಜೆಯೂ ಮುಖ್ಯ ಜನರ ಆರೋಗ್ಯವೂ ಮುಖ್ಯ  – ಶಾಸಕ  ಸುಕುಮಾರ್ ಶೆಟ್ಟಿ

Spread the love

ನನಗೆ ಗುದ್ದಲಿ ಪೂಜೆಯೂ ಮುಖ್ಯ ಜನರ ಆರೋಗ್ಯವೂ ಮುಖ್ಯ  – ಶಾಸಕ  ಸುಕುಮಾರ್ ಶೆಟ್ಟಿ

ಕುಂದಾಪುರ: ಮುದೂರು ಭಾಗದಲ್ಲಿ ಡೆಂಘೀ ಜ್ವರದ ವಿರುದ್ದ ಆರೋಗ್ಯ ಇಲಾಖೆಯ ಜೊತೆಗೆ ಅಲ್ಲಿನ ಸ್ಥಳೀಯಾಡಳಿತದ ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರು ತಿಂಗಳುಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಸಚಿವರೊಂದಿಗೂ ಈ ಬಗ್ಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ವ್ಯಾಪಕವಾಗಿ ಹರಡುತ್ತಿರುವ ಈ ಜ್ವರವನ್ನು ತಡೆಗಟ್ಟಲು ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಟೀಕೆ ಮಾಡುವವರು ಒಂದೆರಡು ದಿನಗಳ ಹಿಂದಷ್ಟೇ ಬಂದು ಶೋ ಕೊಟ್ಟು ಹೋಗಿದ್ದಾರೆ. ನಾನು ಈಗಲೂ ಗುದ್ದಲಿ ಪೂಜೆ ಮುಗಿಸಿ‌ ಬಂದಿರುವೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ‌.

ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಡೆಂಘೀ ಪೀಡಿತರನ್ನು ಶುಕ್ರವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಜಿಲ್ಲಾಧಿಕಾರಿಯಿಂದ ಹಿಡಿದು ಆರೋಗ್ಯಾಧಿಕಾರಿಗಳ ತನಕ ಡೆಂಘೀ ಉಲ್ಬಣಗೊಂಡ ಪ್ರದೇಶಕ್ಕೆ ಭೇಟಿ ನಡೆಸಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಎರಡು ಆಂಬುಲೆನ್ಸ್, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಅಂಬೂಲೆನ್ಸ್ ಅನ್ನು ಡೆಂಘೀ ಹಿನ್ನೆಲೆಯಲ್ಲಿ ಸೇವೆಗೆ ಮೀಸಲಿರಿಸಿದ್ದು, ತಾಲೂಕು ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆದು ಡೆಂಘೀ ಪೀಡಿತರ ಶುಶ್ರೂಷೆ ಮಾಡಲಾಗುತ್ತದೆ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರೋಪ ಮಾಡಿದರೆ ಸಾಲದು, ನನಗೆ ಗುದ್ದಲಿ ಪೂಜೆಯೂ ಮುಖ್ಯ ಜನರ ಆರೋಗ್ಯವೂ ಮುಖ್ಯ. ಕೇವಲ ಮಾತನಾಡಿದರೆ ಸಾಲದು ಕೆಲಸ ಮಾಡುವ ತಾಕತ್ತು ಬೇಕು. ಟದು ನಮಗಿದೆ ಎಂದರು.

ಕಳೆದೊಂದು ತಿಂಗಳಿಂದ ಡೆಂಘೀ ಪೀಡಿತರಿಗೆ ಸ್ಥಳೀಯ ಸೊಸೈಟಿ ಊಟ ನೀಡುತ್ತಿದ್ದು, ಗ್ರಾಮ ಪಂಚಾಯಿತಿ ಡೆಂಘೀ ಪ್ರದೇಶದಲ್ಲಿ ಫಾಗಿಂಗ್ ವ್ಯವಸ್ಥೆ ಮಾಡುತ್ತಿದೆ. ಕೆಡಿಪಿ ಸಭೆಯಲ್ಲೂ ಡೆಂಘೀ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸುವುದಲ್ಲದೆ ಎಲ್ಲಾ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ. ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಭೆಯಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಹೇಳಿದರು.

ರಬ್ಬರ್ ಟ್ಯಾಂಪಿಂಗ್ ಪ್ರದೇಶದಲ್ಲಿ ಮಾತ್ರ ಡೆಂಘೀ ಕಾಣಿಸಿಕೊಳ್ಳುತ್ತಿದ್ದು, ರಾಷ್ಟ್ರೀಯ ಆರೋಗ್ಯ ನಿಧಿಯಲ್ಲಿ ಹಣ ಸಾಕಷ್ಟಿದ್ದು, ಅದರ ಬಳಕೆ ಏಕಿಲ್ಲ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಪ್ರಸ್ತಾಪ ಮಾಡಿ, ಡೆಂಘೀ ಪ್ರದೇಶಕ್ಕೆ ಏನು ಕೊಟ್ಟಿದ್ದೀರಿ ಎಂದು ಪ್ರಶ್ನಿಸುತ್ತೇನೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡೆಂಘೀ ಪೀಡಿತರಿಗೆ ಚಿಕಿತ್ಸಾ ವೆಚ್ಚ ಭರಿಸುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ಗಮನ ಸೆಳೆಯಲಾಗುತ್ತದೆ. ರೋಗದ ವಿರುದ್ಧ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಹಿಡಿದು ಎಲ್ಲಾ ಸದಸ್ಯರು ಶ್ರಮಿಸುತ್ತಿದ್ದು, ಬೈಂದೂರು ಅಭಿವೃದ್ಧಿ ನನ್ನ ಉದ್ದೇಶವಾಗಿದ್ದರಿಂದ ಗುದ್ದಲಿ ಪೂಜೆ ಕೂಡಾ ಮುಖ್ಯವಾಗುತ್ತದೆ. ಹಿಂದೆ ಬೈಂದೂರು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಆ ಸಮಸ್ಯೆ ಒಂದೆರಡು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಯಾರು ಏನೇ ಹೇಳಲಿ ಶಾಸಕನಾಗಿ ನನ್ನ ಜವಾಬ್ದಾರಿ ನಿಭಾಯಿಸುವುವಲ್ಲಿ ಟೀಕೆ ಟಿಪ್ಪಣಿ ಮಾಮೂಲಾಗಿದ್ದು, ಅಭಿವೃದ್ಧಿ ಪರ್ವ ಮುಂದುವರಿಯಲಿದೆ. ಟೀಕೆ ಮಾಡುವವರು ಆಸ್ಪತ್ರೆಗೆ ಬಂದು ಶೋ ಮಾಡಿದರೆ ಆಗೋದಿಲ್ಲ ಎಂದರು.

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೊ, ಡೆಂಘೀ ನೋಡಲ್ ಆಧಿಕಾರಿ ನಾಗೇಶ್, ಡೆಂಘೀ ಪೀತರ ಚಿಕಿತ್ಸೆ ದಾಖಲಾತಿ, ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು.

ಜಡ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಸದಸ್ಯ ನಾರಾಯಣ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ ಇದ್ದರು.


Spread the love

Leave a Reply