‘ನನ್ನ ನಗರ ನನ್ನ ಬಜೆಟ್’ ನಾಗರಿಕರ ಸಹಭಾಗಿತ್ವದ ಬಜೆಟ್ ಅಭಿಯಾನಕ್ಕೆ ಚಾಲನೆ

Spread the love

ಮಂಗಳೂರು ಮಹಾನಗರ ಪಾಲಿಕೆಯಿಂದ ನಾಗರಿಕರ ಸಹಕಾರದೊಂದಿಗೆ ‘ನನ್ನ ನಗರ ನನ್ನ ಬಜೆಟ್’ ಎಂಬ ನಾಗರಿಕರ ಸಹಭಾಗಿತ್ವದ ಬಜೆಟ್ ಅಭಿಯಾನಕ್ಕೆ ಚಾಲನೆ

ಮಂಗಳೂರಿನ ವಿವಿಧ ವಾರ್ಡ್‌ ಸಮಿತಿಗಳ ಸದಸ್ಯರು ಮತ್ತು ನಾಗರಿಕರ ಉಪಸ್ಥಿತಿಯಲ್ಲಿ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಆ್ಯಂಡ್ ಡೆಮಾಕ್ರಸಿ ಮತ್ತು ಮಂಗಳೂರು ವಾರ್ಡ್ ಸಮಿತಿ ಬಳಗದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ (ಎಂಸಿಸಿ) ವಾರ್ಷಿಕ ನಾಗರಿಕ ಸಹಭಾಗಿತ್ವದ ಆಯವ್ಯಯ ಅಭಿಯಾನದ 2ನೇ ಆವೃತ್ತಿ – ‘ನನ್ನ ನಗರ ನನ್ನ ಬಜೆಟ್’ ಗೆ (ಮೈ ಸಿಟಿ ಮೈ ಬಜೆಟ್‌ಗೆ) ಇಂದು ಮಿನಿ ಟೌನ್ ಹಾಲ್‌ನಲ್ಲಿ ಚಾಲನೆ ನೀಡಲಾಯಿತು.

ಇತ್ತೀಚೆಗೆ ಜನಾಗ್ರಹ ಸಂಸ್ಥೆಯು ಯಶಸ್ವಿಯಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 243 ವಾರ್ಡ್‌ಗಳಾದ್ಯಂತ ಬಜೆಟ್ ಬಸ್ ಮೂಲಕ ನಾಗರಿಕರಿಂದ 16 ಸಾವಿರಕ್ಕೂ ಹೆಚ್ಚು ನಗರ ಬಜೆಟ್ನ ಆದ್ಯತೆಯ ಆಯ್ಕೆಯ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸುವ ಮೂಲಕ ನನ್ನ ನಗರ ನನ್ನ ಬಜೆಟ್ ನ ಅಭಿಯಾನದ 7 ನೇ ಆವೃತ್ತಿಯನ್ನು ಪೂರ್ಣಗೊಳಿಸಿದೆ.

ಮಂಗಳೂರಿನಲ್ಲಿ ‘ನನ್ನ ನಗರ ನನ್ನ ಬಜೆಟ್’ ಅಭಿಯಾನವು 29 ಜನವರಿ 2023 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಜೆಟ್ ಬಸ್ ಮಂಗಳೂರಿನ 60 ವಾರ್ಡ್‌ಗಳಲ್ಲಿ ಸಂಚರಿಸಲಿದ್ದು, 2023-24ನೇ ಸಾಲಿನ ಮಹಾನಗರ ಪಾಲಿಕೆಯ ಮುಂಬರುವ ಬಜೆಟ್‌ಗೆ ನಾಗರಿಕರಿಂದ ಪ್ರಾಶಸ್ತ್ಯದ ಆಯ್ಕೆಯ ವಿಷಯದ ಮಾಹಿತಿ ಸಂಗ್ರಹಿಸಲಿದೆ. ನಗರ ಪಾಲಿಕೆ ಸದಸ್ಯರುಗಳು, ಪಾಲಿಕೆ ಅಧಿಕಾರಿಗಳು ಮತ್ತು ನಾಗರಿಕರ ವಾರ್ಡ್ ಸಮಿತಿ ಸದಸ್ಯರೊಂದಿಗೆ ವ್ಯಾಪಕವಾದ ಸಮಾಲೋಚನೆಯ ಆಧಾರದ ಮೇಲೆ ಸಿದ್ಧಪಡಿಸಲಾದ ದೃಢೀಕೃತ ಲಿಖಿತ ಅರ್ಜಿಗಳ ನಮೂನೆಯು ಸಿದ್ಧಪಡಿಸಲಾಗಿದೆ. ನಾಗರಿಕರಿಗೆ ತಾವು ವಾಸಿಸುವ ವಾರ್ಡ್‌ಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಆದ್ಯತೆಗಳನ್ನು ಈಗಾಗಲೇ ಸಿದ್ಧಪಡಿಸಲಾದ ಲಿಖಿತ ಅರ್ಜಿ ನಮೂನೆಗಳ ಮೂಲಕ ಒದಗಿಸಲು ಲಭ್ಯವಿರುತ್ತವೆ.

ಪಾದಚಾರಿ ಮಾರ್ಗಗಳು, (ಫುಟ್ ಪಾತ್ ಗಳು) ಘನತ್ಯಾಜ್ಯ ನಿರ್ವಹಣೆ,ಬೃಹತ್ ನೀರಿನ ಚರಂಡಿಗಳು, (ಸ್ಟ್ರೋಮ್ ವಾಟರ್ ಡ್ರೈನ್), ಬೀದಿದೀಪಗಳು, ಉದ್ಯಾನವನಗಳು, ಸಾರ್ವಜನಿಕ ಶೌಚಾಲಯ, ರಸ್ತೆಗಳು ಮತ್ತು ಒಳಚರಂಡಿ ಸೇರಿದಂತೆ 8 ವರ್ಗಗಳ ಪಟ್ಟಿಯಿಂದ ನಾಗರಿಕರು ತಮ್ಮ ನಿವಾಸದ ವಾರ್ಡ ಗಳಿಗೆ ಸಂಬಂಧಿಸಿದಂತೆ ಪ್ರಮುಖ 3 ಆದ್ಯತೆಗಳನ್ನು ಸೂಚಿಸಬೇಕು.

ಈ ವರ್ಷದ ಜನಾಭಿಪ್ರಾಯದ ಸಂಗ್ರಹಣೆಯ ವಿಭಾಗಗಳನ್ನು ವಾರ್ಡ್ ಮಟ್ಟದಲ್ಲಿ ಹವಾಮಾನ ಪ್ರಕ್ರಿಯೆ (ಸುಸ್ಥಿರ ಅಭಿವೃದ್ಧಿ) ಮೇಲೆ ವಿಶೇಷ ಗಮನಹರಿಸುವ ಮೂಲಕ ಆಯ್ಕೆ ಮಾಡಲಾಗಿದೆ. ಇಂದಿನ ಉದ್ಘಾಟನಾ ಸಮಾರಂಭದ ಭಾಗವಾಗಿ, ನಗರದ ವಿವಿಧ ವಾರ್ಡ್‌ಗಳ ನಾಗರಿಕ ಸ್ವಯಂಸೇವಕರಿಗೆ ಜನಾಗ್ರಹ ಸಂಸ್ಥೆಯ ರಾಜ್ಯ ತಂಡವು ನಾಗರಿಕ ಸಹಭಾಗಿತ್ವದ ಬಜೆಟ್ ಕುರಿತು ವಿವರವಾದ ಕಾರ್ಯಾಗಾರವನ್ನು ನಡೆಸಿತು. .

ಜನವರಿ 29, 2023 ರವರೆಗೆ, ಜನಾಗ್ರಹ ಸಂಸ್ಥೆಯ ತಂಡವು ಮಂಗಳೂರು ನಗರಾದ್ಯಂತ ವ್ಯಾಪಕವಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs), ಸರ್ಕಾರೇತರ ಸಂಸ್ಥೆಗಳು ( NGOಗಳು) ಮತ್ತು ನಾಗರಿಕರ ವಾರ್ಡ್ ಸಮಿತಿಗಳ ಜೊತೆಗೆ ಕಾರ್ಯಾಗಾರಗಳ ಸರಣಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಆದ್ದರಿಂದ, ಮಂಗಳೂರು ನಗರದ ಸಕ್ರಿಯ ನಾಗರಿಕರು ಮತ್ತು ಸಂಘ ಸಂಸ್ಥೆಗಳು ತಮ್ಮ ವಾಸದ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲು ಇಚ್ಛಿಸುವವರು, ಜನಾಗ್ರಹ ಸಂಸ್ಥೆಯ ಮಂಗಳೂರು ಸಂಯೋಜಕರಾದ ಕೊಲೆಟ್ ಕಾರ್ಡೋಜಾ ರವರ ಮೊಬೈಲ್ ಸಂಖ್ಯೆ 9599462937 ಸಂಪರ್ಕಿಸಬಹುದು. ಜನಾಭಿಪ್ರಾಯವನ್ನು ಸಲ್ಲಿಸ ಬಯಸುವ ನಾಗರಿಕರು ಆನ್ ಲೈನ್ ವಿಕಲ್ಪದ ಮೂಲಕವೂ ಈ ಅಭಿಯಾನದ ಅಧಿಕೃತ ಜಾಲತಾಣವಾದ ( website) www.mycitymybudget.in ಲಾಗಿನ್ ಆಗಿ ಸಲ್ಲಿಸಬಹುದು.

ಜನಾಗ್ರಹ ಸಂಸ್ಥೆಯು, ನಾಗರಿಕರಿಂದ ಸ್ವೀಕೃತಗೊಂಡ ಅಭಿಪ್ರಾಯಗಳನ್ನು ವ್ಯವಸ್ಥಿತವಾಗಿ ಕ್ರೂಡೀಕರಿಸಿ, ವಿವರವಾದ ವಿಶ್ಲೇಷಣೆಯ ವರದಿಯನ್ನು ಸಿದ್ಧಪಡಿಸುತ್ತದೆ. ಮುಂಬರುವ ಬಜೆಟ್‌ನಲ್ಲಿ, ನಾಗರಿಕರ ಸಲಹೆ ಸೂಚನೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲು ಮತ್ತು ಸೂಕ್ತ ಹಣಕಾಸು ವಿನಿಯೋಗಿಸಲು ಅನುಕೂಲಕರವಾಗಲು ಮಂಗಳೂರು ಮಹಾನಗರ ಪಾಲಿಕೆಗೆ, ‘ನನ್ನ ನಗರ ನನ್ನ ಬಜೆಟ್” ಅಭಿಯಾನದ ವಿವರವಾದ ವಿಶ್ಲೇಷಣಾತ್ಮಕ ವರದಿಯನ್ನು 2023 ರ ಫೆಬ್ರವರಿ 4 ರೊಳಗೆ ಸಲ್ಲಿಸಲಾಗುತ್ತದೆ.

“ನನ್ನ ನಗರ ನನ್ನ ಬಜೆಟ್’ ಮಹತ್ವಪೂರ್ಣ ಅಭಿಯಾನವನ್ನು, ಮಂಗಳೂರು ಮಹಾನಗರ ಪಾಲಿಕೆಯು ಜನಾಗ್ರಹ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಿದೆ. ನಮ್ಮ ಜನರ ನಿರೀಕ್ಷೆ ಏನೆಂಬುದನ್ನು ನಾವು ತಿಳಿದುಕೊಳ್ಳುವುದು ಒಳ್ಳೆಯದು, ಇದರಿಂದ ನಾವು ನಾಗರಿಕ ಕೇಂದ್ರಿತ ಬಜೆಟ್ ಅನ್ನು ಹೊಂದಬಹುದು ”ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಅಕ್ಷಯ್ ಶ್ರೀಧರ್, ಐಎಎಸ್ ಹೇಳಿದರು.

“ನನ್ನ ನಗರ ನನ್ನ ಬಜೆಟ್ ಅಭಿಯಾನವು ನಮ್ಮ ನಗರಗಳಲ್ಲಿ ಮೂಲಸೌಕರ್ಯ ಮತ್ತು ನಾಗರಿಕ ಸೇವೆಗಳ ಯೋಜನೆ ಮತ್ತು ಬಜೆಟ್ ತಯಾರಿಕೆಯ ಪ್ರಕ್ರಿಯೆಯಲ್ಲಿ ನಿಜವಾದ ವಿಕೇಂದ್ರೀಕರಣವನ್ನು ಸಕ್ರಿಯಗೊಳಿಸುತ್ತದೆ. ಮಂಗಳೂರು ನಗರ ಪಾಲಿಕೆಯು ವಾರ್ಡ್ ಸಮಿತಿಯನ್ನು ರಚಿಸುವ ಮತ್ತು ನಿಯಮಿತ ಸಭೆಗಳನ್ನು ನಡೆಸುವ ಮೂಲಕ ಪ್ರವರ್ತಕ ಹೆಜ್ಜೆಯನ್ನು ಇಟ್ಟಿದೆ ಮತ್ತು ನಾಗರಿಕರಿಗೆ ತಮ್ಮ ವಾರ್ಡ್‌ಗಳ ಬಜೆಟ್ ತಯಾರಿಕೆಯಲ್ಲಿ ಕೊಡುಗೆ ನೀಡಲು ಅಧಿಕಾರ ನೀಡಿದೆ. ನಾಗರಿಕರು ತಮ್ಮ ನೆರೆಹೊರೆ ಮತ್ತು ವಾರ್ಡ್‌ಗಳ ಪರಿವರ್ತನೆಯಲ್ಲಿ ಭಾಗವಹಿಸಲು ಇದು ಉತ್ತಮ ಅವಕಾಶವಾಗಿದೆ, ಎಂದು ಸಂತೋಷ ನರಗುಂದ, ಜನಾಗ್ರಹ ಸಂಸ್ಥೆಯ, ನಾಗರಿಕ ಸಹಭಾಗಿತ್ವ ವಿಭಾಗದ, ಕರ್ನಾಟಕ ರಾಜ್ಯ ಪ್ರಮುಖ ಹೇಳಿದರು.

“ನನ್ನ ನಗರ ನನ್ನ ಬಜೆಟ್” ಅಭಿಯಾನವು ನಗರಾಡಳಿತದ ವಿಕೇಂದ್ರೀಕರಣದ ಮೊದಲ ಹೆಜ್ಜೆಯಾಗಿದೆ. ನಗರದ ಅಭಿವೃದ್ಧಿಗೆ ಬಜೆಟ್ ಹೇಗೆ ವಿನಿಯೋಗಿಸಬೇಕು ಎಂಬುದರ ಕುರಿತು ನಾಗರಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ. ಈ ಅಭಿಯಾನದ ಮೂಲಕ ಬಜೆಟ್ ಬಸ್ ಮಂಗಳೂರಿನ ಎಲ್ಲಾ 60 ವಾರ್ಡ್‌ಗಳಿಗೆ ಭೇಟಿ ನೀಡಿ ವಾರ್ಡ್‌ಗಳ ಅಭಿವೃದ್ಧಿಗೆ ಯಾವ ಕ್ಷೇತ್ರಗಳ ಆದ್ಯತೆಯ ಆಯ್ಕೆಯ ಅಗತ್ಯವಿದೆ ಎಂಬುದರ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ ಎಂದು ಮಂಗಳೂರು ವಾರ್ಡ್ ಸಮಿತಿ ಬಳಗದ ಸಂಚಾಲಕ ಮತ್ತು ವಾರ್ಡ್-46 ಸಮಿತಿ (ಕಂಟೋನ್ಮೆಂಟ್) ಸದಸ್ಯ ಕಿಶೋರ್ ಅತ್ತಾವರ ಹೇಳಿದರು.

ನನ್ನ ನಗರ ನನ್ನ ಬಜೆಟ್’ ಅಭಿಯಾನದ 2ನೇ ಆವೃತ್ತಿಯನ್ನು ಮಂಗಳೂರಿನಲ್ಲಿ ಅಪಾರ ಸಂಖ್ಯೆಯ ನಾಗರಿಕರ ಸಮ್ಮುಖದಲ್ಲಿ ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಇದು ಮಂಗಳೂರಿನಲ್ಲಿ ನಾಗರಿಕ ಸಹಭಾಗಿತ್ವದ ಬಜೆಟ್‌ನ ಮಹತ್ವದ ಹೆಜ್ಜೆಯಾಗಿದೆ ಮತ್ತು ನಗರ ಪಾಲಿಕೆಯಿಂದ ತಕ್ಷಣದ ಗಮನವನ್ನು ಕೋರುವ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಾಮಗಾರಿಗಳ ಬಗ್ಗೆ ನಾಗರಿಕರು ಧ್ವನಿಯಾಗಲು ಈ ಅಭಿಯಾನವು ದಾರಿ ಮಾಡಿಕೊಡುತ್ತದೆ, ಎಂದು ಮಂಜುನಾಥ ಹಂಪಾಪುರ ಎಲ್, ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಕಾರ್ಯಕ್ರಮ ನಿರ್ವಾಹಕರು ಹೇಳಿದರು.
.


Spread the love

Leave a Reply

Please enter your comment!
Please enter your name here