
ನನ್ನ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದಾರೆ:ಗಂಗರಾಜು
ಮೈಸೂರು: ನನ್ನ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ ಬೇಹುಗಾರಿಕೆ ಮಾಡುತ್ತಿದ್ದಾರೆ ಎಂದು ಆಡಿಯೋ ಬಿಡುಗಡೆ ಮಾಡಿರುವ ಸಾಮಾಜಿಕ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೂಪಾ ನನ್ನ ಜತೆ 25 ನಿಮಿಷ ಮಾತನಾಡಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ಧದ ಹೋರಾಟಕ್ಕೆ ನನ್ನನ್ನು ಬಳಸಿಕೊಳ್ಳಲು ಅವರು ಪ್ರಯತ್ನ ಮಾಡಿದ್ದರು. ಒಬ್ಬರ ವಿರುದ್ಧ ಹೋರಾಡುವುದು ಸರಿಯಲ್ಲ. ಈ ಸಂಬಂಧ ವಿಚಾರಣೆಗೆ ಕರೆದರೇ ಮಾಹಿತಿ ನೀಡುತ್ತೇನೆ. ಸರ್ಕಾರಕ್ಕೆ ಎಲ್ಲ ದಾಖಲೆ ಕೊಡುತ್ತೇನೆ. ರೂಪಾ ಮಾತಿನಿಂದ ನನಗೆ ನೋವಾಗಿದೆ. ರೂಪಾ ನನಗೆ ಫೋನ್ ಮಾಡಿದಾಗ ಭೂ ವ್ಯವಹಾರಗಳ ಬಗ್ಗೆ ಪ್ರಶ್ನೆ ಮಾಡಿದರು.
ಸಿಬಿಐ ಅಧಿಕಾರಿಗಳಂತೆ ರೂಪಾ ಪ್ರಶ್ನಿಸಿದರು. ಅವಾಚ್ಯ ಶಬ್ದದಿಂದಲೂ ನಿಂದಿಸಿದ್ದಾರೆ. ರೋಹಿಣಿ ಅಕ್ರಮದ ಬಗ್ಗೆ ನನ್ನ ಬಳಿ ಸಾಕಷ್ಟು ದಾಖಲೆ ಇದೆ. ರೋಹಿಣಿ ಅಕ್ರಮದ ಬಗ್ಗೆ ಮಾಧ್ಯಮಗಳ ಬಳಿ ಹೇಳಿ ಎಂದು ಹೇಳಿದ್ದರು. ನನಗೆ ಫೋಟೋಗಳನ್ನು ಕಳಿಸಿ ಮಾಧ್ಯಮಗಳ ಮುಂದೆ ಹೋಗಿ ಎಂದಿದ್ದರು. ಆದರೆ ನಾನು ನಿರಾಕರಿಸಿದ್ದಕ್ಕೆ ನನ್ನನ್ನು ರೂಪಾ ನಿಂದಿಸಿದ್ದಾರೆ. ಅನ್ಯಾಯ ಮಾಡಿದವರ ವಿರುದ್ಧ ನಾನು ಹೋರಾಟ ಮಾಡುತ್ತೇನೆ. ಈಕೆ ಹೇಳಿದ್ದಾರೆಂದು ಬೇರೆಯವರ ತೇಜೋವಧೆ ಮಾಡಲಾಗಲ್ಲ ಎಂದು ತಿಳಿಸಿದರು.
ನನ್ನ ಕುಟುಂಬಕ್ಕೆ ಏನಾದರೂ ಸಮಸ್ಯೆ ಆದರೆ ಅದಕ್ಕೆ ರೂಪಾ ಕಾರಣ. ಅಧಿಕಾರ ಬಳಸಿ ರೂಪಾ ಏನಾದರೂ ಮಾಡಬಹುದು. ಅವರ ವಿರುದ್ಧ ಕ್ರಿಮಿನಲ ಕೇಸ್ ಹಾಕುತ್ತೇನೆ ಎಂದರು.