
ನರ್ಸ್‌ಗಳಿಗೆ ಸಮರ್ಪಣಾ ಭಾವ ಇರುವುದು ಅಗತ್ಯ
ಮೈಸೂರು: ನರ್ಸ್‌ಗಳು ಕಾಲ ಕಾಲಕ್ಕೆ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಆ ಮೂಲಕ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ವೃತ್ತಿಯಲ್ಲಿ ಸಮರ್ಪಣಾ ಮನೋಭಾವ ಇರಬೇಕು ಎಂದು ಹಾಸನ ಜಿಲ್ಲೆಯ ಹೊಳೆನರಸೀಪುರ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲೆ ಡಾ.ಕೆ.ಪಿ. ದಾಕ್ಷಾಯಿಣಿ ತಿಳಿಸಿದರು.
ನಗರದ ಜೆ.ಕೆ.ಮೈದಾನದ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ 2022-23ನೇ ಸಾಲಿನ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರ ಕಮ್ಯುನಿಟಿ ಹೆಲ್ತ ಆಫೀಸರ್ ಹುದ್ದೆ ಸೃಷ್ಟಿಸಿದ್ದು, ಬಿಎಸ್ಸಿ ನರ್ಸಿಂಗ್ ಶಿಕ್ಷಣ ಪಡೆದವರು ಈ ಹುದ್ದೆಗೆ ಅರ್ಹರು. ಈ ರೀತಿ ನರ್ಸಿಂಗ್ ಕ್ಷೇತ್ರದಲ್ಲಿ ಹೊಸ ಹುದ್ದೆಗಳು ಸೃಷ್ಟಿಯಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ನರ್ಸಿಂಗ್ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತಿದ್ದು, ನರ್ಸಿಂಗ್ ಶಿಕ್ಷಣ ಪಡೆದವರಿಗೆ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ನರ್ಸ್‌ಗಳಿಗೆ ದೇಶದಲ್ಲಿ ಸಾಕಷ್ಟು ಬೇಡಿಕೆ ಇದ್ದು, ವಿದ್ಯಾರ್ಥಿಗಳು ಕೌಶಲ್ಯ ವೃದ್ಧಿಸಿಕೊಂಡು ನರ್ಸಿಂಗ್ ಕ್ಷೇತ್ರದಲ್ಲಿ ಉತ್ತಮ ಹುದ್ದೆಗಳನ್ನು ಪಡೆಯಬೇಕು. ವೈದ್ಯಕೀಯ ತಂಡದೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕು. ರೋಗಿಗಳಿಗೆ ನಗು ಮೊಗದೊಂದಿಗೆ ಸೇವೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಪ್ರಾಂಶುಪಾಲೆ ಎ.ಬಿ.ಪುಷ್ಪಲತಾ ಮಾತನಾಡಿ, ನರ್ಸಿಂಗ್ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವದಿಂದ ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಿಮಗೆ ಬೋಧಿಸಿದ ಪ್ರತಿಜ್ಞಾವಿಧಿಯಂತೆ ನೀವು ಕಾರ್ಯನಿರ್ವಹಿಸಿದಾಗ ನರ್ಸಿಂಗ್ ವೃತ್ತಿಯ ಘನತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ, ಮುಖ್ಯ ಆಡಳಿತಾಧಿಕಾರಿ ಗೌರವ್ ಶೆಟ್ಟಿ, ಕೆ.ಆರ್. ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಬಿ.ಎಲ್. ನಂಜುಂಡಸ್ವಾಮಿ, ಸ್ಥಾನೀಯ ವೈದ್ಯಾಧಿಕಾರಿ ಡಾ.ಎಂ.ಎಸ್. ರಾಜೇಶ್ ಕುಮಾರ್, ಸಹಾಯಕ ಆಡಳಿತಾಧಿಕಾರಿ ಕೆ.ಎಂ. ಚಂದ್ರಕಲಾ, ಪಿಕೆಟಿಬಿ ಮತ್ತು ಸಿ.ಡಿ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಶಾಂತ್, ಸರ್ಕಾರಿ ಶುಶ್ರೂಷ ಶಾಲೆ ಪ್ರಾಂಶುಪಾಲ ಪಿ.ರುದ್ರಪ್ಪ, ಕೆ.ಆರ್. ಆಸ್ಪತ್ರೆಯ ಶುಶ್ರೂಷ ಅಧೀಕ್ಷಕಿ ಗಂಗಮ್ಮ, ಚೆಲುವಾಂಬ ಆಸ್ಪತ್ರೆಯ ಶುಶ್ರೂಷ ಅಧೀಕ್ಷಕಿ ವಿ. ಸಾಕಮ್ಮ, ಪಿಕೆಟಿಬಿ ಮತ್ತು ಸಿ.ಡಿ. ಆಸ್ಪತ್ರೆಯ ಶುಶ್ರೂಷ ಅಧೀಕ್ಷಕಿ ವನಜಾಕ್ಷಿ, ಜಿಲ್ಲಾ ಸರ್ಕಾರಿ ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷೆ ಹೇಮಲತಾ ಇದ್ದರು.