ನವಂಬರ್ 13: 2022ರ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ 

Spread the love

ನವಂಬರ್ 13: 2022ರ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ 

ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ, ಕಲಾಸಂಘಟನೆಗೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದ್ದು, ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ನವಂಬರ್ 13, ಭಾನುವಾರ ನಡೆಯಲಿದೆ. ಸಂಸ್ಥೆಯ ಆಶ್ರಯದಾತರಾಗಿದ್ದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯೂ ಸೇರಿದಂತೆ ಕಲಾಸಾಧಕರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ದಿನಪೂರ್ತಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪೂರ್ವಾಹ್ನ 10.30 ಗಂಟೆಗೆ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರು ಮಾಡಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯರೂ, ಯಕ್ಷಗಾನ ಪೋಷಕರೂ ಆದ ಡಾ. ಪದ್ಮನಾಭ ಕಾಮತ್ ವಹಿಸಲಿದ್ದಾರೆ. ಯಕ್ಷಗಾನ ವಿದ್ವಾಂಸ ಪ್ರೊ. ಎಂ. ಎಲ್. ಸಾಮಗರು ಅಭ್ಯಾಗತರಾಗಿ ಭಾಗವಹಿಸುತ್ತಾರೆ.

ಪೂರ್ವಾಹ್ನ 11.00 ರಿಂದ 12.00ರ ವರೆಗೆ ‘ತೆಂಕುತಿಟ್ಟಿನ ಯಕ್ಷಗಾನ ಮೇಳಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದ್ದು ಇತಿಹಾಸಕ್ಕೆ ಸೇರಿಹೋದ ವಿವಿಧ ಮೇಳಗಳ ಕುರಿತು ಶ್ರೀ ದಾಮೋದರ ಕುಡ್ವ, ಶ್ರೀಮತಿ ವಿಜಯಲಕ್ಷ್ಮೀ ಶಾನುಭೋಗ್, ಶ್ರೀ ಎಂ. ನಾ. ಚಂಬಲ್ತಿಮಾರ್, ಶ್ರೀಮತಿ ಸಾವಿತ್ರಿ ಪೂರ್ಣಚಂದ್ರ ಮತ್ತು ಶ್ರೀ ಶಾಂತಾರಾಮ ಕುಡ್ವ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ. ಸಂಕಿರಣದ ಅಧ್ಯಕ್ಷತೆಯನ್ನು ಡಾ. ಉಪ್ಪಂಗಳ ಶಂಕರ ನಾರಾಯಣ ಭಟ್ ವಹಿಸಲಿದ್ದು ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ ಸಮನ್ವಯಕಾರರಾಗಿರುತ್ತಾರೆ.
ಅಪರಾಹ್ನ 12.00 ರಿಂದ 1.00 ಗಂಟೆಯವರೆಗೆ ‘ಯಕ್ಷಗಾನ ಕಲಾರಂಗ : ಸಂಘಟನೆಯ ಮಾದರಿ’ ಎಂಬ ವಿಷಯದ ಕುರಿತ ಮಾತುಕತೆಯಲ್ಲಿ ಶ್ರೀ ಮಧುಕರ ಭಾಗವತ, ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಶ್ರೀ ಸತೀಶ ಅಡಪ, ಶ್ರೀ ರವೀಶ್ ಎಚ್. ಟಿ., ಶ್ರೀ ಶೇಖರ ಮಣಿಯಾಣಿ, ಶ್ರೀ ರವಿ ಅಲೆವೂರಾಯ, ಡಾ. ಶ್ರುತಿಕೀರ್ತಿ ರಾಜ್, ಶ್ರೀ ಮಹಾವೀರ ಪಾಂಡಿ ಮತ್ತು ಶ್ರೀ ಮಿಥುನ್ ಕೊಡೆತ್ತೂರು ಪಾಲ್ಗೊಳ್ಳಲಿದ್ದಾರೆ. ಶ್ರೀ ನವನೀತ್ ಶೆಟ್ಟಿ ಕದ್ರಿ ಸಮನ್ವಯಕಾರರಾಗಿರುತ್ತಾರೆ.

ಸಂಜೆ 4.00 ರಿಂದ ಜರಗಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು, ಅಧ್ಯಕ್ಷತೆಯನ್ನು ಲೋಕಸೇವಾ ಆಯೋಗದ ಅಧ್ಯಕ್ಷರಾದ ಡಾ. ಟಿ ಶ್ಯಾಮ್ ಭಟ್ ವಹಿಸಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ www.yakshaganakalaranga.com ವೆಬ್‍ಸೈಟ್ ಲೋಕಾರ್ಪಣೆ ಮಾಡಲಿದ್ದು, ಕಲಾವಿದರ ಕುರಿತ ಸಾಕ್ಷ್ಯಚಿತ್ರವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ಅನಾವರಣಗೊಳಿಸುತ್ತಾರೆ. ಮುಖ್ಯ ಅಭ್ಯಾಗತರಾಗಿ ಶ್ರೀ ಹರಿಕೃಷ್ಣ ಪುನರೂರು, ಪ್ರೊ. ಎಂ. ಬಿ. ಪುರಾಣಿಕ್, ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಪ್ರೊ. ಜಿ. ಆರ್. ರೈ, ಶ್ರೀ ಪಿ. ಗೋಕುಲನಾಥ ಪ್ರಭು, ಡಾ. ಜೆ. ಎನ್. ಭಟ್, ಶ್ರೀ ಲೀಲಾಕ್ಷ ಕರ್ಕೆರ, ಶ್ರೀ ಪಣಂಬೂರು ವಾಸುದೇವ ಐತಾಳ್ ಮತ್ತು ಸಿಎ ಶಿವಾನಂದ ಪೈ ಭಾಗವಹಿಸುತ್ತಾರೆ. ಶ್ರೀ ವಿಶ್ವೇಶತೀರ್ಥ ‘ಯಕ್ಷಗಾನ ಕಲಾರಂಗ’ ಪ್ರಶಸ್ತಿಯನ್ನು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡಕ್ಕೆ ನೀಡಲಾಗುವುದು. ಅಂತೆಯೇ ವಿವಿಧ ಗಣ್ಯರ ಸ್ಮರಣಾರ್ಥ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಡಿ. ಮನೋಹರ್ ಕುಮಾರ್, ಕೃಷ್ಣಸ್ವಾಮಿ ಜೋಯಿಸ, ಮಲವಳ್ಳಿ ನಾರಾಯಣ ಭಟ್,ಅಣ್ಣಪ್ಪ ಕುಲಾಲ್ ನೀರ್ಜಡ್ಡು, ರಾಮಜೋಗಿ ಜೋಡುಕಲ್ಲು, ಮುಂಡ್ಕೂರು ಕೃಷ್ಣ ಶೆಟ್ಟಿ, ಉಮೇಶ್ ಭಟ್ ಬಾಡ, ಐರ್‍ಬೈಲ್ ಆನಂದ ಶೆಟ್ಟಿ, ಮಹಮ್ಮದ್ ಗೌಸ್, ಜೋಗು ಕುಲಾಲ್, ವೆಂಕಪ್ಪ ಆಚಾರ್, ಸಜಿಪ ಚೆನ್ನಪ್ಪ ಗೌಡ, ಲಕ್ಷ್ಮೀಶ ಅಮ್ಮಣ್ಣಾಯ, ವಿದ್ವಾನ್ ಗಣಪತಿ ಭಟ್, ಕೂಟೇಲು ಬಾಲಕೃಷ್ಣ ಭಟ್ ಮತ್ತು ಮಾರ್ವಿ ನಿತ್ಯಾನಂದ ಹೆಬ್ಬಾರ್ ಇವರಿಗೆ ಪ್ರದಾನ ಮಾಡಲಾಗುವುದು. ಗಣ್ಯರ ಗೌರವಾರ್ಥ ನೀಡುವ ಪ್ರಶಸ್ತಿಯನ್ನು ಯು. ಆನಂದ್ ಮತ್ತು ಶಿವರಾಮ ಪಣಂಬೂರು ಸ್ವೀಕರಿಸಲಿದ್ದಾರೆ. ಯಕ್ಷಗಾನ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಯನ್ನು ಎಚ್. ಎನ್. ಶೃಂಗೇಶ್ವರ ಅವರಿಗೆ ಪ್ರದಾನ ಮಾಡಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವದಲ್ಲಿ ಅಪರಾಹ್ನ 2.00 ರಿಂದ ತೆಂಕುತಿಟ್ಟಿನ ಯಕ್ಷಗಾನ ರೂಪಕ ‘ಶ್ರೀ ಮನೋಹರ ಸ್ವಾಮಿ ಪರಾಕು’ ಮತ್ತು ಸಂಜೆ 6.00 ರಿಂದ ಬಡಗುತಿಟ್ಟಿನ ಯಕ್ಷಗಾನ ‘ಚಕ್ರಚಂಡಿಕೆ’ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here