ನವಜಾತ ಶಿಶುವನ್ನು ಕಸದಬುಟ್ಟಿಗೆ ಎಸೆಯದೆ ಮಮತೆಯ ತೊಟ್ಟಿಲಿಗೆ ಹಾಕಿ !

Spread the love

ನವಜಾತ ಶಿಶುವನ್ನು ಕಸದಬುಟ್ಟಿಗೆ ಎಸೆಯದೆ ಮಮತೆಯ ತೊಟ್ಟಿಲಿಗೆ ಹಾಕಿ !

ಮಡಿಕೇರಿ: ಇತ್ತೀಚೆಗೆ ತಮಗೆ ಬೇಡವಾದ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವ ಬದಲಿಗೆ ಮಮತೆಯ ತೊಟ್ಟಿಲಿಗೆ ಒಪ್ಪಿಸಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಇಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ, ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ವಾಗದಿರಲಿ ಎಂಬ ಕಾರಣಕ್ಕೆ ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಮತೆಯ ತೊಟ್ಟಿಲನ್ನು ತೆರೆಯಲಾಗಿದೆ.

ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಹಾನಿಗೀಡಾಗಿದ್ದ ಮಮತೆಯ ತೊಟ್ಟಿಲು ಕಟ್ಟಡವನ್ನು ಮತ್ತೆ ಜುಲೈ ತಿಂಗಳಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆಯ ಆವರಣದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕೆಳಭಾಗದ ನೂತನ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಾಗುತ್ತಿದೆ. ಪೋಷಕರು ತಮಗೆ ಬೇಡವಾದ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದು, ಎಳೆಯ ಜೀವಗಳು ಬೀದಿ ನಾಯಿ, ವಿಷ ಜಂತುಗಳಿಗೆ ಬಲಿಯಾಗುವುದರ ಬದಲಿಗೆ ಪೋಷಕರು ತಮಗೆ ಬೇಡವಾದ ಮಗುವನ್ನು ಮಮತೆಯ ತೊಟ್ಟಿಲಿನಲ್ಲಿ ಹಾಕಿದರೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಓಂಕಾರೇಶ್ವರ ದೇವಸ್ಥಾನ ರಸ್ತೆ ಮಡಿಕೇರಿ ಈ ಕಚೇರಿಗೆ ಒಪ್ಪಿಸುವುದರ ಮೂಲಕ ಕಮರಿ ಹೋಗುವ ಜೀವವನ್ನು ಉಳಿಸಿದ ಪುಣ್ಯ ಬರಲಿದೆ.

ಮಮತೆಯ ತೊಟ್ಟಿಲಿಗೆ ಒಪ್ಪಿಸಿದ ಮಗುವನ್ನು ಸರ್ಕಾರದ ವಿಶೇಷ ದತ್ತು ಕೇಂದ್ರದಲ್ಲಿ ಸಲಹಲಾಗುತ್ತದೆ. ತಾಯಂದಿರು, ಪೋಷಕರು ಮನಸ್ಸು ಬದಲಾಯಿಸಿ ಮಗು ತಮಗೆ ಬೇಕೆನಿಸಿದ್ದಲ್ಲಿ 60 ದಿನದೊಳಗೆ ಕೋರಿಕೆಯನ್ನು ಸಲ್ಲಿಸಿ ಮಗುವನ್ನು ಪಡೆಯಬಹುದಾಗಿದೆ. 60 ದಿನ ಕಳೆದ ನಂತರ ಮಗು ದತ್ತು ಪ್ರಕ್ರಿಯೆಗೆ ಅರ್ಹವಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.


Spread the love