ನವಜಾತ ಹೆಣ್ಣು ಶಿಶುವನ್ನು ಪೊದೆಗೆ ಎಸೆದು ಹೋದ ಕ್ರೂರಿಗಳು! ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ದಾರಿಹೋಕ ಮಹಿಳೆ

Spread the love

ನವಜಾತ ಹೆಣ್ಣು ಶಿಶುವನ್ನು ಪೊದೆಗೆ ಎಸೆದು ಹೋದ ಕ್ರೂರಿಗಳು! ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ದಾರಿಹೋಕ ಮಹಿಳೆ

ಕುಂದಾಪುರ: ನವಜಾತ ಹೆಣ್ಣು ಶಿಶುವೊಂದನ್ನು ಪೋಷಕರು ಕಾಡಿನ ಪೊದೆಯಲ್ಲಿ ಎಸೆದು ಹೋದ ಅಮಾನವೀಯ ಘಟನೆ ಅಮಾಸೆಬೈಲು ಪೋಲಿಸ್ ಠಾಣಾ ವ್ಯಾಪ್ತಿಯ ಮಚ್ಚಟ್ಟು ಎಂಬಲ್ಲಿ ಬುಧವಾರ ಸಂಜೆ ಬೆಳಕಿಗೆ ಬಂದಿದೆ. ಹಾಲು ಡೇರಿಗೆ ತೆರಳುತ್ತಿದ್ದ ಮಚ್ಚಟ್ಟು ಗ್ರಾಮದ ಮಡಿವಾಳಕಟ್ಟು ನಿವಾಸಿ ಗೀತಾ ಎಂಬ ಮಹಿಳೆ ಮಗುವನ್ನು ರಕ್ಷಿಸಿ ಅಮಾಸೆಬೈಲು ಠಾಣೆಗೆ ಒಪ್ಪಿಸಿದ್ದಾರೆ.

ಬುಧವಾರ ಸಂಜೆ ಗೀತಾ ಅವರು ಹಾಲು ಡೈರಿಗೆ ಹೋಗುತ್ತಿದ್ದ ವೇಳೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಸೇತುವೆ ಬಳಿಯ ರಸ್ತೆ ಬದಿಯ ಕಾಡು ಪೊದೆಯಲ್ಲಿ ಮಗು ಅಳುವ ಧ್ವನಿ ಕೇಳಿ ಹುಡುಕಿದಾಗ ಹೆಣ್ಣು ಮಗು ಪತ್ತೆಯಾಗಿದ್ದು ಅದನ್ನು ಎತ್ತಿಕೊಂಡು ಅಮಾಸೆಬೈಲು ಪೊಲೀಸ್‌ ಠಾಣೆಗೆ ತಂದಿದ್ದು ಸುಮಾರು 7 ದಿನಗಳ ನವಜಾತ ಹೆಣ್ಣು ಶಿಶು ಅದಾಗಿತ್ತು. ಮಗುವನ್ನು ಹಡೆದಿರುವ ಮಗುವಿನ ತಂದೆ -ತಾಯಿ ಮಗುವಿನ ಪಾಲನೆ ಪೋಷಣೆ ಮಾಡದೆ ಮಗುವನ್ನು ಅಪಾಯಕ್ಕೋಡ್ಡುವ ಉದ್ದೇಶದಿಂದ ರಸ್ತೆ ಬದಿಯ ಕಾಡು ಪೊದೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಅಮಾಸೆಬೈಲು ಠಾಣೆಯಲ್ಲಿ ಕಲಂ: 317 ಜೊತೆಗೆ 34 ಐಪಿಸಿ ಅಡಿ ದೂರು ದಾಖಲಾಗಿದೆ.


Spread the love